
ಚೆಕ್ ಅಮಾನ್ಯ ಪ್ರಕರಣ: ಹಕೀಂ ಕೂರ್ನಡ್ಕ ಖುಲಾಸೆ
ಮಂಗಳೂರು: ಚೆಕ್ ಅಮಾನ್ಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಕೀಂ ಕೂರ್ನಡ್ಕ ಅವರನ್ನು ೯ನೇ ಜೆಎಂಎಫ್‌ಸಿ ನ್ಯಾಯಾಲಯವು ಖುಲಾಸೆಗೊಳಿಸಿದೆ.
2021ರಲ್ಲಿ ಯುವತಿಯೊಬ್ಬರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಚಿಕಿತ್ಸೆಯ ಬಾಕಿ ಮೊತ್ತ 1.25ಲಕ್ಷ ರೂ.ವನ್ನು ತಾನು ಪಾವತಿಸುವುದಾಗಿ ಹಕೀಂ ಕೂರ್ನಡ್ಕ ತನ್ನ ಚೆಕ್ ನೀಡಿದ್ದರು ಎಂದು ಆರೋಪಿಸಿ ಆಸ್ಪತ್ರೆಯ ಆಡಳಿತ ಮಂಡಳಿಯು ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು.
ನ್ಯಾಯಾಲಯದಿಂದ ಸಮನ್ಸ್ ಸ್ವೀಕರಿಸಿದ ಹಕೀಂ ಕೂರ್ನಡ್ಕ ತಾನು ಯಾವುದೇ ಹಣವನ್ನು ಆಸ್ಪತ್ರೆಗೆ ಕೊಡಲು ಬಾಕಿ ಇಲ್ಲ. ಯುವತಿಯ ಪರವಾಗಿ ತಾನು ಯಾವುದೇ ಚೆಕ್ಕನ್ನು ಖಾಸಗಿ ಆಸ್ಪತ್ರೆಗೆ ನೀಡಿಲ್ಲ ಎಂದು ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಶಿಲ್ಪಾ ಬ್ಯಾಡಗಿ ಅವರು ಹಕೀಂ ಕೂರ್ನಡ್ಕರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದರು.
ಲೆಕ್ಸ್ ಜೂರಿಸ್ ಲಾ ಚೇಂಬರ್ ಮಂಗಳೂರು ಇದರ ವಕೀಲರಾದ ಆಸಿಫ್ ಬೈಕಾಡಿ, ಮುಹಮ್ಮದ್ ಅಸ್ಗರ್ ಮುಡಿಪು, ಇರ್ಷಾದ್ ಸಖಾಫಿ ಮೊಂಟೆಪದವು, ಅಯಾಝ್ ಚಾರ್ಮಾಡಿ ವಾದಿಸಿದ್ದರು.