ಸೈಬರ್ ಅಪರಾಧ ನಿಯಂತ್ರಣ: ಪ್ರತಿ ಕಾನ್‌ಸ್ಟೇಬಲ್‌ಗೂ ತರಬೇತಿ

ಸೈಬರ್ ಅಪರಾಧ ನಿಯಂತ್ರಣ: ಪ್ರತಿ ಕಾನ್‌ಸ್ಟೇಬಲ್‌ಗೂ ತರಬೇತಿ

ಮಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾನ್‌ಸ್ಟೇಬಲ್‌ಗೂ ಸೈಬರ್ ಅಪರಾಧದ ಬಗ್ಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಸೈಬರ್ ಅಪರಾಧ ಪ್ರಕರಣಗಳ ವರದಿಗೆ ಎಲ್ಲಾ ಕಡೆ ಅವಕಾಶ ಮಾಡಲಾಗಿದೆ. ಇದಕ್ಕಾಗಿ ಪ್ರತೀ ಎಸ್ಪಿ ಕಚೇರಿಯಲ್ಲಿ ತರಬೇತಿ ಘಟಕ ಆರಂಭಿಸಲಾಗಿದೆ. ಇಲ್ಲಿ ಕಾನ್ ಸ್ಟೇಬಲ್ ಗಳಿಗೆ ತಾಂತ್ರಿಕ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು. 

ರಾಜ್ಯ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಶೇ.99ರಷ್ಟು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೊಳಪಡಿಸಲಾಗಿದೆ. ಅಪರಾಧ ದರ ಕಡಿಮೆ ಆಗಿದೆ. ಹೈದರಾಬಾದ್ ನ ಸಂಸ್ಥೆಯೊಂದರ ವರದಿ ಪ್ರಕಾರ ದೇಶದಲ್ಲಿಯೇ ಜನರಿಗೆ ಶೀಘ್ರ ನ್ಯಾಯ ಒದಗಿಸುವಲ್ಲಿ ಕರ್ನಾಟಕ ಪೊಲೀಸರು ಮೊದಲ ಸ್ಥಾನದಲ್ಲಿದ್ದಾರೆ ಎಂಬುದು ಶ್ಲಾಘನೀಯ ಎಂದವರು ಹೇಳಿದರು. 

ದಿನದ 24 ಗಂಟೆಯೂ ನಮ್ಮ ಸುರಕ್ಷತೆಯನ್ನು ಖಾತರಿಪಡಿಸುವ ಪೊಲೀಸ್ ಸಿಬ್ಬಂದಿ ಕೂಡಾ ಉತ್ತಮ ಜೀವನ, ಮನೆಯನ್ನು ಹೊಂದಿರಬೇಕೆಂಬ ನಿಟ್ಟಿನಲ್ಲಿ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ಈ ದಿನ 64 ವಸತಿ ಗೃಹಗಳನ್ನು ಮಂಗಳೂರಿನಲ್ಲಿ ಉದ್ಘಾಟಿಸಲಾಗಿದೆ. ಆರಂಭದಲ್ಲಿ ತಲಾ 18 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಆರಂಭಿಸಲಾಗಿದ್ದರೆ, ಇದೀಗ ತಲಾ 28 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ. ಶೇ.40ರಷ್ಟು ಪೊಲೀಸ್ ಸಿಬ್ಬಂದಿ ವಸತಿ ಗೃಹಗಳನ್ನು ಹೊಂದಿದ್ದು, ಎಲ್ಲರಿಗೂ ವಸತಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article