
ಮತೀಯ ಕೊಲೆ: ಎಸ್‌ಐಟಿ ರಚನೆಗೆ ಮನವಿ
ಮಂಗಳೂರು: ಕಳೆದ 10 ವರ್ಷಗಳಲ್ಲಿ ದ.ಕ. ಜಿಲ್ಲೆಯಲ್ಲಿ ಮತೀಯ ಹಾಗೂ ಪ್ರತಿರೋಧದ ಕಾರಣಗಳಿಗಾಗಿ ನಡೆದಿರುವ ಎಲ್ಲಾ ಹತ್ಯೆ ಪ್ರಕರಣಗಳ ತನಿಖೆಗೆ ’ವಿಶೇಷ ತನಿಖಾ ತಂಡ’ ರಚಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣದ ದ.ಕ. ಜಿಲ್ಲಾ ಸಮಿತಿಯು ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಿದೆ.
ನಗರದಲ್ಲಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಇಂದು ಭೇಟಿಯಾದ ದಸಂಸ ನಿಯೋಗ, ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ದ.ಕ. ಜಿಲ್ಲೆಯನ್ನು ಕೆಲವೊಂದು ಕೋಮುವಾದಿ ಮನಸ್ಥಿತಿಯ ವ್ಯಕ್ತಿಗಳು, ರಾಜಕೀಯ ಪಕ್ಷಗಳು ಹಾಗೂ ಮತೀಯವಾದಿ ಸಂಘಟನೆಗಳು ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕೋಸ್ಕರ ಜನರ ಮನಸ್ಸಿನಲ್ಲಿ ಮತೀಯ ವಿಷಬೀಜ ತುಂಬಿ ಜಿಲ್ಲೆಯಲ್ಲಿ ಅಮಾಯಕರ ಹತ್ಯೆಗಳನ್ನು ಮಾಡಿಸುವ ಮೂಲಕ ಜಿಲ್ಲೆಯ ನಾಗರಿಕರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿ ಜಿಲ್ಲೆಯ ಸಾಮರಸ್ಯವನ್ನು ಕೆಡಿಸುತ್ತಿವೆ. ಈ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ಕೋಮುದ್ವೇಷದ ಹತ್ಯೆಗಳ ಹಿಂದಿರುವ ಕಾಣದ ಕೈಗಳು(ಸೂತ್ರಧಾರರು) ಹಾಗೂ ಸಂಘಟನೆಗಳನ್ನು ಪತ್ತೆಹಚ್ಚಿ ಕಠಿಣ ಕಾನೂನಿನಡಿ ಶಿಕ್ಷಗೆ ಒಳಪಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.
ನಿಯೋಗದಲ್ಲಿ ದಸಂಸ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರೆ, ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಜಿಲ್ಲಾ ಸಂಘಟನಾ ಸಂಚಾಲಕರಾದ ರಘು ಕೆ. ಎಕ್ಕಾರು, ಕೃಷ್ಣಾನಂದ ಡಿ., ಉಡುಪಿ ಜಿಲ್ಲಾ ಸಂಚಾಲಕ ರಮೇಶ್ ಕೋಟ್ಯಾನ್, ಸುಹಾಸ್ ಶೆಟ್ಟಿಯಿಂದ ಹತ್ಯೆಗೊಳಗಾದ ಕೀರ್ತಿಯವರ ತಂದೆ ಸಂಜೀವ ಹಾಗೂ ತಾಯಿ ವನಜಾ, ದಲಿತ ಮುಖಂಡರಾದ ದಿನೇಶ್ ಮೂಳೂರು, ಪ್ರೇಮ್ ಬಲ್ಲಾಳ್ ಬಾಗ್, ಗಣೇಶ್ ಮೂಡುಬಿದಿರೆ ಮೊದಲಾದವರಿದ್ದರು.