
ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಸುರಕ್ಷಿತ ಕುಡಿಯುವ ನೀರು: ಡಾ. ಆನಂದ್ ಕೆ. ಸೂಚನೆ
ಮಂಗಳೂರು: ಹೋಟೆಲ್, ವಸತಿ ಗೃಹ, ಬಾರ್ ರೆಸ್ಟೋರೆಂಟ್ಗಳಲ್ಲಿ ಗ್ರಾಹಕರಿಗೆ ಸುರಕ್ಷಿತ ಕುಡಿಯುವ ನೀರು/ಆಹಾರ ಒದಗಿಸುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್.ಕೆ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯತ್‌ನಲ್ಲಿ ಗುರುವಾರ ನಡೆದ ಜಿಲ್ಲಾ ಕಣ್ಗಾವಲು ಮತ್ತು ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಮಾದರಿಯನ್ನು ಕಾಲಕಾಲಕ್ಕೆ ಪರೀಕ್ಷಿಸಿ ಗುಣಮಟ್ಟವನ್ನು ದೃಢೀಕರಿಸಿ ಶುದ್ಧೀಕರಣಕ್ಕೆ ಬೇಕಾದ ಮೌಲ್ಯಮಾಪನಾ ಕ್ರಮಗಳನ್ನು ಅನುಸರಿಸಿ, ಸಾರ್ವಜನಿಕ ನೀರಿನ ಜಲಾಗಾರವನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ ಕ್ಲೋರಿನೇಶನ್ ಮಾಡಿ ರೆಸಿಡುವೆಲ್ ಕ್ಲೋರಿನ್ ಪ್ರಮಾಣವನ್ನು ಇಲಾಖೆಯ ಸಹಕಾರದೊಂದಿಗೆ ಖಾತ್ರಿ ಪಡಿಸಿಕೊಂಡು, ನೀರನ್ನು ಸರಬರಾಜು ಮಾಡುವುದು ಈ ಮೂಲಕ ಜಲಜನ್ಯ ರೋಗಗಳನ್ನು ನಿಯಂತ್ರಿಸಲು ಕ್ರಮವಹಿಸಬೇಕು ಎಂದು ಅವರು ಹೇಳಿದರು.
ಸಾಕು ಪ್ರಾಣಿಗಳ ವ್ಯಾಕ್ಸಿನೇಶನ್ ಇನ್ನೂ ಹೆಚ್ಚಾಗಿ ಆಯೋಜಿಸಿ ಸಾಕು ಪ್ರಾಣಿಗಳ ರೇಬಿಸ್ ವ್ಯಾಕ್ಸಿನೇಶನ್ ಅನ್ನು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳಬೇಕು. ಸಂಶಯಾಸ್ಪದ ರೋಗ ಪ್ರಕರಣಗಳು ಕಂಡು ಬಂದಲ್ಲಿ ಅಂತರ ಇಲಾಖಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಅಸಹಜ/ಸಂಶಯಾಸ್ಪದವಾಗಿ ಸತ್ತ ಮಂಗಗಳನ್ನು ಸಂಬಂಧಿತ ಇಲಾಖಾ ಸಮನ್ವಯದೊಂದಿಗೆ ಸೂಕ್ತವಾಗಿ ವಿಲೇವಾರಿ ಮಾಡಿ ಪ್ರಯೋಗಾಲಯಕ್ಕೆ ರವಾನಿಸಬೇಕು ಎಂದು ಹೇಳಿದರು.
ಕೃಷಿ ಕಾರ್ಮಿಕರಿಗೆ ಸೂಕ್ತವಾದ ಆರೋಗ್ಯ ಶಿಕ್ಷಣ ನೀಡಿ ಇಲಿಜ್ವರ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಬೇಕಾದ ರಕ್ಷಣಾತ್ಮಕ ಕ್ರಮಗಳ ಬಗ್ಗೆ, ಜಾಗೃತಿ ಮೂಡಿಸಬೇಕು. ತೋಟ, ಕೃಷಿ ಕಾರ್ಯ ಮಾಡುವವರು ಯಾವುದೇ ಗಾಯಗಳನ್ನು ಹೊಂದಿದ್ದಲ್ಲಿ ವಾಟರ್ ಪ್ರೂಫ್ ಬ್ಯಾಂಡೇಜ್ ಬಳಸಲು ಸೂಚಿಸಬೇಕು. ರೈತ ಸಂಪರ್ಕ ಸಭೆಗಳಲ್ಲಿ ವಿಷಕಾರಿ ಹಾವುಗಳ ಬಗ್ಗೆ ಪ್ರಥಮ ಚಿಕಿತ್ಸೆಯ ಬಗ್ಗೆ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಎ.ಎಸ್.ವಿ ಲಸಿಕೆ ದೊರೆಯುವ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.
ನಾಗರಿಕ ಬೈಲಾಗಳನ್ನು (ಕಾನೂನು) ಕಟ್ಟುನಿಟ್ಟಾಗಿ ಜಾರಿಗೊಳಿಸಿ, ವ್ಯಾಪ್ತಿ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕಾಪಾಡಿಕೊಳ್ಳಬೇಕು. ಚರಂಡಿಗಳಲ್ಲಿ ನೀರು ನಿಲ್ಲುವುದನ್ನು ನಿರ್ವಹಣೆ ಮತ್ತು ದುರಸ್ತಿ ಮಾಡದೇ ಇರುವುದರಿಂದ ರೋಗ ಉತ್ಪತ್ತಿಯಾಗುವ ಸಾಧ್ಯತೆ ಇರುತ್ತದೆ. ನಿಯಮಿತವಾಗಿ ನಿರ್ವಹಣೆ ಮಾಡಿದ್ದಲ್ಲಿ, ಮನೆಮನೆಗಳಲ್ಲಿ ನಿಯಮಿತವಾಗಿ ಕಸ ವಿಲೇವಾರಿ ನಿರ್ವಹಿಸಿದ್ದಲ್ಲಿ, ಸಮುದಾಯದ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡಬಹುದಾಗಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್, ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್, ಡಾ.ಜಗದೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ.ಕೆ ಉಳೆಪಾಡಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ದೀಪಾ ಪ್ರಭು, ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.