
ಆದಿವಾಸಿ ಕೊರಗ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಸರಕಾರ ಅತೀ ಹೆಚ್ಚಿನ ಪ್ರಮಾಣದಲ್ಲಿ ಧನವಿನಿಯೋಗ ಮಾಡಬೇಕು: ಮುನೀರ್ ಕಾಟಿಪಳ್ಳ ಆಗ್ರಹ
ಮಂಗಳೂರು: ಜಾಗತೀಕರಣ, ಉದಾರೀಕರಣ ಮತ್ತು ಖಾಸಾಗಿಕರಣಗಳ ಆರ್ಭಟದ ಪ್ರಸಕ್ತ ಸಂದರ್ಭದಲ್ಲಿ ಕನಿಷ್ಟ ಅವಕಾಶಗಳನ್ನು ಪಡೆಯಬೇಕಾದರೆ ಔಪಚಾರೀಕ ಶಿಕ್ಷಣ ಅನಿವಾರ‍್ಯವಾಗಿದೆ. ಆದುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆದಿವಾಸಿ ಕೊರಗ ಸಮುದಾಯದ ಮಕ್ಕಳ ಶಿಕಣಕ್ಕೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಧನವಿನಿಯೋಗ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರರೂ, ಸಿಪಿಐ(ಎಂ)ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಗ್ರಹಿಸಿದರು.
ಅವರು ಇಂದು ವಾಮಂಜೂರಿನ ಶ್ರೀ ಕೊರಗಜ್ಜ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ನಡೆದ ಆದಿವಾಸಿ ಕೊರಗ ಸಮುದಾಯದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಮತ್ತು ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕವೆನ್ನುವ ಎಲ್ಲಾ ಜ್ಞಾನ ಪರಂಪರೆಯ ವಾರೀಸುದಾರರಾಗಿರುವ ಆದಿವಾಸಿ ಕೊರಗ ಸಮುದಾಯವು ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಪರಿಣಾಮವಾಗಿ ಎಲ್ಲಾ ರೀತಿಯ ಶೋಷಣೆಗೆ ಒಳಗಾಗಿ ಅಳಿವಿನ ಅಂಚಿನಲ್ಲಿರುವ ಬುಡಕಟ್ಟು ಸಮುದಾಯವಾಗಿದೆ. ಉಭಯ ಜಿಲ್ಲೆಗಳಲ್ಲಿ ಇರುವ ನೂರಾರು ಸಂಖ್ಯೆಯಲ್ಲಿ ಇರುವ ಪ್ರಖ್ಯಾತ ಕೊರಗಜ್ಜ ಆರಾಧನ ಗುಡಿಗಳ ಆದಾಯದಲ್ಲಿ ವಾರ್ಷಿಕವಾಗಿ ಕನಿಷ್ಟ ಹತ್ತು ಶೇಕಡಾದಷ್ಟು ಆದಾಯವನ್ನು ಕೊರಗ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುವ ಆವಶ್ಯಕತೆ ಇದೆ ಎಂದರು.
ಮುಖ್ಯ ಅಥಿತಿಯಾಗಿ ಭಾಗವಹಿಸಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಶತಶತಮಾನಗಳ ಕಾಲ ಅನ್ಯಾಯ ಶೋಷಣೆ, ದಬ್ಬಾಳಿಕೆ ಮತ್ತು ಜಾತಿ ಅಸ್ಪೃಶ್ಯತೆಯಂತಹ ಅಮಾನವೀಯತೆಗೆ ಬಲಿಪಶು ಆಗಿರುವ ಕರಾವಳಿ ಕರ್ನಾಟಕದ ಮೂಲ ನಿವಾಸಿಗಳಗಿರುವ ಆದಿವಾಸಿ ಕೊರಗ ಸಮುದಾಯದ ವಿಮೋಚನೆಯ ಮೊದಲ ಹಂತವೇ ಶಿಕ್ಷಣವೇ ಆಗಿದ್ದು, ಇದಕ್ಕಾಗಿ ಸರಕಾರ ಮತ್ತು ಸಮಾಜ ಅರ್ಪಣಾ ಮನೋಭಾವದಿಂದ ಶ್ರಮಿಸಬೇಕೆಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಅಧ್ಯಕ್ಷ ಕರಿಯ ಕೆ. ಅವರು ವಹಿಸಿದ್ದರು. ವಿದ್ಯಾರ್ಥಿ ಮಾರ್ಗದರ್ಶನ ಮತ್ತು ದಿಕ್ಸೂಚಿ ಭಾಷಣವನ್ನು ಶ್ರೀ ಕೊರಗಜ್ಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ವಿ.ಲಕ್ಷಣ್ ಅವರು ನಡೆಸಿಕೊಟ್ಟರು.
ಸಮಾರಂಭದಲ್ಲಿ ಸಿಐಟಿಯು ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಶೇಖರ್ ವಾಮಂಜೂರು, ಕೃಷ್ಣ ಇನ್ನಾ, ಮೂಲ್ಕಿ ವಲಯ ಅಧ್ಯಕ್ಷರಾದ ಶಶಿಧರ್ ಕೆರೆಕಾಡು, ಜಿಲ್ಲಾ ಸಮಿತಿ ಸದಸ್ಯರಾದ ತುಳಸಿ ಬೆಳ್ಮಣ್ಣು, ಪ್ರೇಮ ಅವರು ಶುಭಾಶಯ ಕೋರಿ ಮಾತನಾಡಿದರು.
ತೀರಾ ಬಡತನದಲ್ಲಿ ಶಿಕಣವನ್ನು ಪಡೆಯುತ್ತಿರುವ 100 ವಿದ್ಯಾರ್ಥಿಗಳಿಗೆ ಶ್ರೀ ಕೊರಗಜ್ಜ ಸೇವಾ ಟ್ರಸ್ಟ್‌ನಿಂದ ವಿದ್ಯಾರ್ಥಿ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಪ್ರಾರಂಭದಲ್ಲಿ ವಿಘ್ನೇಶ್ ವಾಮಂಜೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ನಾಯಕಿ ರಶ್ಮಿ ಸಂತೋಷ್ ನಗರ ಇವರು ಕಾರ್ಯಕ್ರಮ ನಿರ್ವಹಿಸಿದರು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಕೋರ್ ಗ್ರೂಪ್ ಸದಸ್ಯರಾದ ಪೂರ್ಣೆಶ್, ರವಿಂದ್ರ, ವಿಕಾಶ್, ವಿನೋದ್, ವಿಮಲೇಶ್, ದಿವೇಶ್, ಮಂಜುಳಾ, ಕೃಷ್ಣ ಪೆರಾರ್, ಕಿರಣ್ ಕತ್ತಲ್‌ಸಾರ್, ನಿತೇಶ್ ರಜನೀಶ್, ಜಯ ಮಧ್ಯ, ಪದ್ಮನಾಭ್ ಮತ್ತಿತರರು ನೇತೃತ್ವ ವಹಿಸಿದ್ದರು. ಪ್ರಾರಂಭದಲ್ಲಿ ಲೇಖನ್ ವಿ. ಸ್ವಾಗತಿಸಿ, ಪುನಿತ್ ವಂದಿಸಿದರು.