
ಎಸ್‌ಐಟಿ ರಚಿಸಿ ಕೋಮು ಪ್ರೇರಿತ ಹತ್ಯೆಗಳ ತನಿಖೆಗೆ ದಲಿತ ಸಂಘರ್ಷ ಸಮಿತಿ ಒತ್ತಾಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ನಡೆದ ಕೋಮು ಪ್ರೇರಿತ ಹತ್ಯೆಗಳ ಕುರಿತಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿ ಹತ್ಯೆ ಹಿಂದಿರುವ ಸೂತ್ರಧಾರರು, ಸಂಘಟನೆಗಳು ಹಾಗೂ ಕಾರಣಗಳನ್ನು ಪತ್ತೆ ಹಚ್ಚಿ ಕಾನೂನಿನ ಶಿಕ್ಷೆಗೆ ಒಳಪಡಿಸಬೇಕು. ರಾಜ್ಯ ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರೊ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಚಲಕ ಸದಾಶಿವ ಪಡುಬಿದ್ರಿ, ತನಿಖೆಯನ್ನು ಹೈಕೋರ್ಟ್ನ ಹಾಲಿ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ದ.ಕ.ಜಿಲ್ಲೆಯಲ್ಲಿ ಒಂದು ಸಮುದಾಯದ ಹತ್ಯೆಗೆ ಪ್ರತೀಕಾರವಾಗಿ ಇನ್ನೊಂದು ಸಮುದಾಯದ ಹತ್ಯೆ ನಡೆಸುವ ಮನಸ್ಥಿತಿ ಮತೀಯವಾದಿಗಳಲ್ಲಿ ತುಂಬಿದೆ. ಇದರಿಂದಾಗಿ ಕಳೆದ 10 ವರ್ಷಗಳ ಅವಧಿಯಲ್ಲಿ ಪ್ರಶಾಂತ್ ಪೂಜಾರಿ, ದೀಪಕ್ ರಾವ್, ಶರತ್ ಮಡಿವಾಳ, ಮಸೂದ್, ಪ್ರವೀಣ್ ನೆಟ್ಟಾರು, ಫಾಝಿಲ್, ಅಶ್ರಫ್, ಸುಹಾಸ್ ಶೆಟ್ಟಿ, ಅಬ್ದುಲ್ ರೆಹಮಾನ್ ಹಾಗೂ ಗುಂಪು ಹತ್ಯೆಗೆ ಅಶ್ರಫ್ ಎಂಬವರು ಬಲಿಯಾಗಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಮತೀಯ ಹಾಗೂ ಪ್ರತೀಕಾರದ ಕಾರಣದಿಂದ ನಡೆದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂದೇಹವಿದೆ. ಆದರೆ ಕೇವಲ ಪ್ರವೀಣ್ ನೆಟ್ಟಾರು ಮತ್ತು ಸುಹಾಸ್ ಶೆಟ್ಟಿ ಕೊಲೆಯನ್ನು ಮಾತ್ರವೇ ಎನ್‌ಐಎಗೆ ವಹಿಸಿರುವುದು ವಿಪರ್ಯಾಸ ಎಂದು ಜಿಲ್ಲಾ ಸಂಘಟನಾ ಸಂಚಾಲಕ ರಘು ಕೆ.ಎಕ್ಕಾರು ಹೇಳಿದರು.
ಮತೀಯ ಮತ್ತು ಪ್ರತೀಕಾರದ ಹತ್ಯೆಗಳಲ್ಲಿ ಧರ್ಮ ಹುಡುಕುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಕೆಲ ಪಕ್ಷಗಳ ನಡವಳಿಕೆ ಬೇಸರ ಹುಟ್ಟಿಸುವಂತಿದೆ. ಬಿಜೆಪಿ ಸರಕಾರ ಇರುವಾಗಲೇ ರೌಡಿ ಶೀಟರ್ ತೆರೆಯಲ್ಪಟ್ಟ ಸುಹಾಸ್ ಶೆಟ್ಟಿ ಕೊಲೆಯನ್ನೂ ಎನ್‌ಐಎಗೆ ವಹಿಸಲಾಗಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಎನ್‌ಐಎ ಇರುವುದು ರಾಷ್ಟ್ರೀಯ ಭದ್ರತೆಯ ವಿಚಾರದ ತನಿಖೆಗಾಗಿ ರೌಡಿ ಶೀಟರ್ ಹತ್ಯೆ ಎನ್‌ಐಎಗೆ ಕೊಡುವ ಉದ್ದೇಶದ ಹಿಂದೆ ಕೊಲೆಗಡುಕರ ರಕ್ಷಣೆಯೇ ಎಂದು ಅವರು ಪ್ರಶ್ನಿಸಿದರು.
ರೌಡಿ ಶೀಟರ್ ತೆರೆಯುವಾಗ ಪೊಲೀಸ್ ಇಲಾಖೆ ಕೆಲವೊಂದು ಮಾನದಂಡಗಳನ್ನು ಅನುಸರಿಸಿರುತ್ತದೆ. ಇಂತಹ ವ್ಯಕ್ತಿ 2020ರಲ್ಲಿ ಕೀರ್ತಿ ಎಂಬ ದಲಿತ ಯುವಕನನ್ನು ಕೊಂದಾಗ ಯಾವುದೇ ಸಂಘಟನೆಗಳವರು, ಪಕ್ಷದವರು ಆತನ ಮನೆಯತ್ತ ಯಾಕೆ ಭೇಟಿ ನೀಡಿಲ್ಲ. ಅಮಾಯಕ ದಲಿತ ಯುವಕ ಕೀರ್ತಿಯನ್ನು ಕೊಂದ ಸುಹಾಸ್ ಶೆಟ್ಟಿ ಹಿಂದೂ ರಕ್ಷಕ ಹೇಗಾಗುತ್ತಾನೆ ಎಂದವರು ಪ್ರಶ್ನಿಸಿದರು.
ಹತ್ಯೆಯ ವಿಚಾರದಲ್ಲಿ ಒಂದು ಸಮುದಾಯವನ್ನು ಓಲೈಸಿ ಇನ್ನೊಂದು ಸಮುದಾಯವನ್ನು ನಿರ್ಲಕ್ಷಿಸುವುದು ಸರಿಯಲ್ಲ. ಇದು ಧರ್ಮ ನಿರಾಪೇಕ್ಷ ಸಂವಿಧಾನದ ವ್ಯವಸ್ಥೆಯ ಅಣಕವಾಗಿದೆ. ಮತೀಯ ಆಧಾರದ ಹಿನ್ನೆಲೆಯಲ್ಲಿ ಹಾಗೂ ಪ್ರತೀಕಾರವಾಗಿ ಅಮಾಯಕರ ಹತ್ಯೆ ನಡೆಸುವುದು ಅಥವಾ ಅಂತಹವರನ್ನು ಬೆಂಬಲಿಸುವುದು ಅಕ್ಷಮ್ಯ ಅಪರಾಧ. ಅಂತವರು ಯಾವುದೇ ಧರ್ಮ, ಸಂಘಟನೆಗಳಿಗೆ ಸೇರಿದ್ದರೂ ಅವರಿಗೆ ಕಾನೂನಡಿ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದರು.
ದಲಿತ ಯುವಕ ಕೀರ್ತಿ ಪೋಷಕರಾದ ಸಂಜೀವ ಮತ್ತು ವನಜಾ ದಂಪತಿ ಏಕೈಕ ಪುತ್ರ. ಯಾವುದೇ ಅಪರಾಧ ಪ್ರಕರಣವಾಗಲಿ, ಯಾವುದೇ ಸಂಘಟನೆಯಲ್ಲೂ ಗುರುತಿಸಿಕೊಳ್ಳದ ಅಮಾಯಕ ಕೀರ್ತಿಯ ಕೊಲೆಯನ್ನು ಸಮಾಜ ಹಾಗೂ ಜನಪ್ರತಿನಿಧಿಗಳು ಮೇಲ್ವರ್ಗ, ಕೆಳವರ್ಗವೆಂಬ ತಾರತಮ್ಯದ ರೀತಿಯಲ್ಲಿ ಪರಿಗಣಿಸಿರುವುದು ಭಾಸವಾಗುತ್ತದೆ. ಆತನ ಕೊಲೆಯಾದ ಸಂದರ್ಭ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲು ಕೂಡಾ ಮೂರು ತಿಂಗಳು ಅಲೆದಾಡಲಾಗಿತ್ತು ಎಂದು ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾನಂದ ಡಿ. ಬೇಸರ ವ್ಯಕ್ತಪಡಿಸಿದರು.
ಮುಖಂಡರಾದ ಕಮಲಾಕ್ಷ ಬಜಾಲ್, ರುಕ್ಕಯ್ಯ ಅಮೀನ್, ಸಂಕಪ್ಪ ಕಾಂಚನ್, ಕೊಲೆಯಾದ ದಲಿತ ಯುವಕ ಕೀರ್ತಿಯ ತಂದೆ ಸಂಜೀವ, ತಾಯಿ ವನಜಾ ಉಪಸ್ಥಿತರಿದ್ದರು.