ಮೋದಿ ಆಡಳಿತದಲ್ಲಿ ದೇಶ ಕ್ಷಿಪ್ರಗತಿಯ ಪ್ರಗತಿ: ಸಚಿವೆ ಶೋಭಾ ಕರಂದ್ಲಾಜೆ

ಮೋದಿ ಆಡಳಿತದಲ್ಲಿ ದೇಶ ಕ್ಷಿಪ್ರಗತಿಯ ಪ್ರಗತಿ: ಸಚಿವೆ ಶೋಭಾ ಕರಂದ್ಲಾಜೆ


ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ 11 ವರ್ಷಗಳ ಆಡಳಿತದ ಅವಧಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧ್ಯವಾಗಿದ್ದು, ದೇಶ ಕ್ಷಿಪ್ರಗತಿಯ ಪ್ರಗತಿ ಸಾಧಿಸಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಗುರುವಾರ ನಗರದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕೇಂದ್ರದ ಸಾಧನೆಗಳನ್ನು ಮನೆ ಮನೆಗೆ ತಿಳಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದೇಶದ ಪ್ರತಿಯೊಬ್ಬ ಮಹಿಳೆ ಕೂಡ ಇಂದು ಸ್ವಾವಲಂಬಿಯಾಗಿ ಬದುಕುವ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಿಯವರ ಆತ್ಮನಿರ್ಭರತೆಯ ಕಲ್ಪನೆಯಿಂದ ಇದು ಸಾಧ್ಯವಾಗಿದೆ. ಇದುವರೆಗೆ ಯಾವ ಸರ್ಕಾರವೂ ಮಾಡದ ಅಭಿವೃದ್ಧಿ ಕಾರ್ಯವನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮಾಡಿದೆ. ಯುವಜನತೆ ಸ್ವ ಉದ್ಯೋಗಗಳನ್ನು ಹೊಂದಲು ಕೇಂದ್ರ ನೆರವು ನೀಡುತ್ತಿದ್ದು, ಇದು ಯುವ ಸಮುದಾಯಕ್ಕೆ ಹೊಸ ದಿಕ್ಕು ತೋರಿಸಿದೆ. ಸ್ಟಾರ್ಟಪ್‌ಗಳು ಹೊಸ ಬದಲಾವಣೆಗೆ ಕಾರಣವಾಗಿವೆ. ಕಳೆದ 11 ವರ್ಷಗಳಲ್ಲಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಬಗ್ಗೆ ಕಾರ್ಯಕರ್ತರು ಮನೆ ಮನೆಗೆ ತೆರಳಿ ಯೋಜನೆಯ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಸರ್ಕಾರ ಯಾವುದೇ ಯೋಜನೆಗಳನ್ನು ಜಾರಿಗೆ ತಂದರೂ ಅದನ್ನು ಜನತೆಗೆ ತಲುಪಿಸುವ ಮಹತ್ತರ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಅದನ್ನು ಬದ್ಧತೆಯಿಂದ ಪ್ರತಿಯೊಬ್ಬರೂ ಮಾಡಬೇಕು. ಬೂತ್, ವಾರ್ಡ್‌ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬರುವ ಹೊತ್ತಿಗೆ ದೇಶದ ಆರ್ಥಿಕತೆ ಅತ್ಯಂತ ದುರ್ಬಲವಾಗಿತ್ತು. ಇಂದು ಆರ್ಥಿಕತೆಯಲ್ಲಿ ನಾಲ್ಕನೇ ಅತಿದೊಡ್ಡ ರಾಷ್ಟ್ರವಾಗಿ ಬೆಳೆದಿದೆ. ಇದರ ಹಿಂದ ಮೋದಿಯವರ ಅವಿರತ ಶ್ರಮವಿದೆ ಎಂದರು.

ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಜನತೆ ಬಯಸಿದ್ದರು. ಮೋದಿಯವರಿಂದ ಇದು ಸಾಧ್ಯವಾಗಿದೆ. ಈ ಕಾರಣದಿಂದ ಅವರು ಜನತೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಕೇಂದ್ರದ ಪ್ರತಿಯೊಂದು ಯೋಜನೆಗಳು ಜನಪರವಾಗಿದ್ದು, ಅದನ್ನು ಮನೆ ಮನೆಗೆ ತಲುಪಿಸುವಲ್ಲಿ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಸಂಸದರು ಹೇಳಿದರು.

ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು.

ಶಾಸಕರಾದ ಉಮಾನಾಥ ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಕ್, ಮಾಜಿ ಶಾಸಕರಾದ ಬಾಲಕೃಷ್ಣ ಭಟ್, ಕೆ.ಮೋನಪ್ಪ ಭಂಡಾರಿ, ಸಂಜೀವ ಮಠಂದೂರು,  ಬಿಜೆಪಿ ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ನಂದನ್ ಮಲ್ಯ, ಮೋಹನ್ ಪಿ.ಎಸ್., ಯತೀಶ್ ಆರ್ವರ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಾಗಾರದ ಸಂಚಾಲಕ ಹರೀಶ್ ಕಂಜಿಪಿಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿತೇಶ್ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article