‘ಬಾಲಗಾನ ಯಶೋಯಾನ’ ಕಾರ್ಯಕ್ರಮಕ್ಕೆ ಚಾಲನೆ

‘ಬಾಲಗಾನ ಯಶೋಯಾನ’ ಕಾರ್ಯಕ್ರಮಕ್ಕೆ ಚಾಲನೆ

ಮಂಗಳೂರು: ಗಾನ ಗಂಧರ್ವ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನೋತ್ಸವದ ಅಂಗವಾಗಿ ಗಾಯಕ ಯಶವಂತ ಎಂ.ಜಿ. ಅವರಿಂದ 24 ಗಂಟೆಗಳ ಕಾಲ ನಿರರ್ಗಳವಾಗಿ ಗಾಯನ ಕಾರ್ಯಕ್ರಮ ‘ಬಾಲಗಾನ ಯಶೋಯಾನ’ಕ್ಕೆ ಮಂಗಳವಾರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಚಾಲನೆ ನೀಡಲಾಯಿತು. 

ವಿರಾಜಪೇಟೆ ಡಿವೈಎಸ್ಪಿ ಎಸ್.ಮಹೇಶ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಹೆಸರು ಅಜರಾಮರ. ಅವರನ್ನು  ಆರಾಧಿಸುವ ಮನಸ್ಸುಗಳು ಎಲ್ಲೆಡೆ ಇವೆ. ಆ ಸಾಧಕನನ್ನು ಸ್ಮರಿಸಲು ಮುಂದಾಗಿರುವುದು ಶ್ರೇಷ್ಠವಾದುದು. ಅಸಮಾನ್ಯ ಸಾಧನೆಗೆ ಮುಂದಾದಾಗ ಮಾತ್ರವೇ  ದಾಖಲೆಯಾಗಿ ಉಳಿಯುತ್ತದೆ. ಒಬ್ಬನೇ ವ್ಯಕ್ತಿ 24 ಗಂಟೆ ಹಾಡುವುದು ಸಾಮಾನ್ಯ ವಿಷಯವಲ್ಲ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಸಲ್ಲಿಸುವ ನೈಜ ಗೌರವವಾಗಿದೆ ಎಂದರು.

ಉದ್ಯಮಿ ಮಲ್ಲಿಕಾ ಶೆಟ್ಟಿ, ಕರಾವಳಿ ಸಂಗೀತ ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ, ಶ್ರೀರಂಗ ಕನ್‌ಸ್ಟ್ರಕ್ಷನ್ಸ್‌ನ ರಾಘವೇಂದ್ರ ಆಚಾರ್ಯ, ಉದ್ಯಮಿ ಕೆ.ಕೆ.ನೌಷಾದ್ ಮುಖ್ಯ ಅತಿಥಿಗಳಾಗಿದ್ದರು. ಗೋಲ್ಡನ್ ಬುಕ್ ಆಫ್ ವಲ್ಡ್‌ರ್ ರೆಕಾರ್ಡ್‌ನ ಏಷಿಯಾ ಮುಖ್ಯಸ್ಥ ಡಿ.ಮನೀಶ್ ವಿಶ್ನೋಯ್ ಇದ್ದರು.

ಮ್ಯಾಂಡೋಲಿನ್ ವಾದಕ ದೇವರಾಜ ಆಚಾರ್, ಕೀಬೋರ್ಡ್ ವಾದಕ ಸತೀಶ್ ಸುರತ್ಕಲ್, ಸಂಗೀತ ಕಲಾವಿದ ತೋನ್ಸೆ ಪುಷ್ಕಳ ಕುಮಾರ್ ಅವರಿಗೆ ಗುರುವಂದನೆ ಸಲಿ ಸಲಾಯಿತು.

ಗಾಯಕ ಯಶವಂತ್ ಎಂ.ಜಿ. ಸ್ವಾಗತಿಸಿ, ದಾಮೋದರ ಶರ್ಮಾ ನಿರೂಪಿಸಿದರು.

24 ಗಂಟೆಗಳ ನಿರಂತರ ಗಾಯನ!:

ಜೂ.3ರ ಸಂಜೆ 3 ಗಂಟೆಯಿಂದ ಜೂ.4ರ ಸಂಜೆ 3 ಗಂಟೆ ತನಕ 24 ಗಂಟೆಗಳ ಕಾಲ ನಿರಂತರವಾಗಿ ಗಾಯಕ ಎಸ್‌ಪಿಬಿ ಅವರು ಹಾಡಿದ ಶೇ.90 ರಷ್ಟುಕನ್ನಡ  ಚಿತ್ರಗೀತೆಗಳು, ಶೇ.5ರಷ್ಟುಭಕ್ತಿ ಗೀತೆಗಳು ಹಾಗೂ ಶೇ.5ರಷ್ಟು ಭಾವಗೀತೆಗಳನ್ನು ಯಶವಂತ ಅವರು ಹಾಡಲಿದ್ದಾರೆ. ಇದಕ್ಕಾಗಿ ಅವರು 240ಕ್ಕಿಂತ ಹೆಚ್ಚಿನ ಹಾಡುಗಳನ್ನು ಸಿದ್ಧಮಾಡಿಕೊಂಡಿದ್ದಾರೆ.

ನಿರಂತರ ಗಾಯನದಲ್ಲಿ ಒಂದೊಂದು ಗಂಟೆಗೆ 5 ನಿಮಿಷಗಳ ವಿರಾಮ ಇರುತ್ತದೆ. ಆಹಾರ ಸೇವಿಸದೆ ಬರೀ ಜ್ಯೂಸ್ ಕುಡಿದು ಹಾಡಲಿದ್ದಾರೆ. ಇವರ ಜತೆಯಲ್ಲಿ ಗಿಟಾರ್ ನಲ್ಲಿ ರಾಜ್‌ಗೋಪಾಲ್, ಕೀಬೋರ್ಡ್‌ನಲ್ಲಿ ದೀಪಕ್ ಜಯಶೀಲನ್, ಡ್ರಮ್ಸ್ ಮತ್ತು ರಿದಂನಲ್ಲಿ ವಾಮನ್ ಕೆ, ತಬಲದಲ್ಲಿ ಪ್ರಜ್ವಲ್ ಆಚಾರ್ಯ, ಕೊಳಲಿನಲ್ಲಿ ವರ್ಷ  ಬಸ್ರೂರ್ ಹಾಗೂ ಸಿತಾರ್‌ನಲ್ಲಿ ಸುಮುಖ್ ಆಚಾರ್ಯ ಭಾಗವಹಿಸಿದ್ದಾರೆ. ಈ ವಿಶ್ವದಾಖಲೆಯಲ್ಲಿ ಅವರು ಕೂಡ ಭಾಜನರಾಗುತ್ತಾರೆ. ಒಂದೊಂದು ಗಂಟೆ ಕುಳಿತು  ಒಂದೊಂದು ಗಂಟೆ ನಿಂತು ಹಾಡಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article