
ಸುಬ್ರಹ್ಮಣ್ಯಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಭೇಟಿ
ಸುಬ್ರಹ್ಮಣ್ಯ: ಕರ್ನಾಟಕ ಸರಕಾರದ ಆಡಳಿತ ಸುಧಾರಣಾ ಇಲಾಖಾ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕರ‍್ಯದರ್ಶಿ ತುಳಸಿ ಮದ್ದಿನೇನಿ ಅವರು ಮಂಗಳವಾರ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ವಿವಿಧೆಡೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಬಳಿ ನಿರ್ಮಾಣ ಆಗುತ್ತಿರುವ ಸೇತುವೆ ಹಾಗೂ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳು, ಕಾಮಗಾರಿ ನಿರ್ವಹಿಸುತ್ತಿರುವವರಿಂದ ಮಾಹಿತಿ ಪಡೆದರು. ಸುಬ್ರಹ್ಮಣ್ಯದ ಪಶು ಆಸ್ಪತ್ರೆ, ಬಿಸಿಎಂ ಹಾಸ್ಟೇಲ್, ಆಶ್ರಮ ಶಾಲೆ, ಸರಕಾರಿ ಪ್ರಾಥಮಿಕ ಆಸ್ಪತ್ರೆ, ಸ್ನಾನಘಟ್ಟ, ಮಾದರಿ ಶಾಲೆ, ಮಾದರಿ ಶಾಲೆಯ ಈ ಹಿಂದಿನ ಮೈದಾನ ಮೊದಲಾದ ಕಡೆಗಳಿಗೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿಸಿಎಂ ಹಾಸ್ಟೇಲ್‌ಗೆ ತೆರಳಿ ಹಾಸ್ಟೇಲ್‌ನ ಪರಿಸರ ಶುಚಿತ್ವ, ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು ಹಾಗೂ ಆಹಾರ ಸವಿದರು. ಈ ಹಿಂದೆ ಮಾದರಿ ಶಾಲೆ ಇದ್ದ ಶಾಲೆಯ ಮೈದಾನದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ತುಳಸಿ ಮದ್ದಿನೇನಿ ಅವರು, ಮುಖ್ಯಮಂತ್ರಿ ಅವರ ಸೂಚನೆಯಂತೆ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಬಿಸಿಎಂ ಹಾಸ್ಟೇಲ್‌ಗೆ ಬೇಟಿ ನೀಡಿದ್ದೇನೆ, ಹಾಸ್ಟೇಲ್‌ನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ, ತಿಂಡಿಯೂ ತಿಂದಿದ್ದೇನೆ ಉತ್ತಮವಾಗಿತ್ತು. ಇರುವುದರಲ್ಲಿ ಚೆನ್ನಾಗಿ ನಡೆಸುತ್ತಿದ್ದಾರೆ, ಹೊಸ ಬಿಲ್ಡಿಂಗ್ ಅಗತ್ಯವಿದೆ. ಪಕ್ಕದ ಆಶ್ರಮ ಶಾಲೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಈ ವಾರ ಪೂರ್ಣಗೊಳ್ಳಲಿದ್ದು, ಶೀಘ್ರ ಹಸ್ತಾಂತರವಾಗಿಲಿದೆ. ಈ ತಿಂಗಳ ಕೊನೆಗೆ ಮಕ್ಕಳು ಇಲ್ಲಿಗೆ ಬರಲಿದ್ದಾರೆ ಎಂದರು.
ಸುಬ್ರಹ್ಮಣ್ಯದ ಪಶು ಆಸ್ಪತ್ರೆಯ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಕಟ್ಟಡ ನಿರ್ಮಿಸಿದರೂ ಮೇಲ್ಗಡೆ ಒಂಡು ಸ್ಲೋಪ್ ಕೊಡಬೇಕು, ಇಲ್ಲವೇ ಶೀಟ್ ರೂಫ್ ಹಾಕಬೇಕು. ಇದರಿಂದ ನೀರು ಸೋರುವುದರಿಂದ ತಡೆಯಬಹುದಾಗಿದೆ. ಇಲ್ಲಿನ ಪಶು ಆಸ್ಪತ್ರೆಗೆ ಗುತ್ತಿಗೆ ಆಧಾರದಲ್ಲಿ ವೈದ್ಯರ ನಿಯೋಜನೆ ಆಗಿದೆ. ಆಸ್ಪತ್ರೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಕ್ಕೆ ಸೂಚಿಸಲಾಗುವುದು ಎಂದರು.
ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯಲ್ಲಿ ಸೇತುವೆ, ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಬಾರಿ ಮಳೆ ಬೇಗ ಬಂದಿದ್ದರಿಂದ ಕಾಮಗಾರಿ ಪೂರ್ಣಗೊಂಡಿಲ್ಲ, ಇನ್ನು ಕಾಮಗಾರಿ ನಡೆಸುವುದು ಕಷ್ಟ. ಮಳೆ ಸ್ವಲ್ಪ ಬಿಡುವು ನೀಡಿದಲ್ಲಿ, ರಸ್ತೆಯನ್ನು ಸಮರ್ಪಕವಾಗಿಸಲು ಸೂಚಿಸಿದ್ದೇನೆ. ಹಾಗೂ ನದಿ ಬಳಿ ಸೂಚನ ಫಲಕಾ, ರಿಫ್ಲೆಕ್ಟರ್ ಅಳವಡಿಸಿ, ಯಾವುದೇ ತೊಂದರೆ ಆಗದಂತೆ ಮುಂಜಾಗ್ರತೆ ವಹಿಸಲು ಸಂಬಂಧಿಸಿದವರಿಗೆ ಸೂಚಿಸಿದ್ದೇನೆ ಎಂದರು.
ಕುಮಾರಧಾರ ಸ್ನಾನಘಟ್ಟದಲ್ಲಿ ಎಸ್‌ಡಿಆರ್‌ಎಫ್ ತಂಡದವರನ್ನು ಭೇಟಿ ಮಾಡಿದ ತುಳಸಿ ಮದ್ದಿನೀನಿ ಅವರು ನೆರೆ ಇರುವ ವೇಳೆ ನದಿಗೆ ಯಾರನ್ನು ಇಳಿಯಲು ಬಿಡಬೇಡಿ, ಎಲ್ಲಾ ರೀತಿಯ ಮುಂಜಾಗ್ರತೆ, ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಿ ಎಂದರು. ಲೋಕೋಪಯೋಗಿ ಇಲಾಖೆಯವರಲ್ಲಿ ಜೋರು ಮಳೆ ಸಂದರ್ಭದಲ್ಲಿ ಸ್ನಾನಘಟ್ಟದ ಬಳಿಯ ರಸ್ತೆಯ ಬಗ್ಗೆ ನಿಗಾ ಇರಿಸಿ, ಎಚ್ಚರಿಕೆ ಕೈಗೊಳ್ಳಿ ಎಂದು ಸೂಚಿಸಿದರು.
ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ಕಡಬ ಕಂದಾಯ ನಿರೀಕ್ಷಕ ಪೃಥ್ವಿ, ಲೋಕೋಪಯೋಗಿ ಇಲಾಖೆ ಇಂಜೀನಿಯರ್ ಪ್ರಮೋದ್, ಸಿಡಿಪಿಒ ಶೈಲಜಾ, ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆಯ ಗೀತಾ, ಆರ್‌ಎಫ್‌ಒ ವಿಮಲ್‌ಬಾಬು, ಶಿಕ್ಷಣಾಧಿಕಾರಿ ಲೋಕೇಶ್, ಸುಬ್ರಹ್ಮಣ್ಯ ಗ್ರಾಮ ಆಡಳಿತಾಧಿಕಾರಿ ರವಿಚಂದ್ರ, ಪಶು ವೈದ್ಯಾಧಿಕಾರಿ ಡಾ.ಮಲ್ಲಿಕಾ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್, ಕರ‍್ಯದರ್ಶಿ ಮೋನಪ್ಪ, ಸೇರಿದಂತೆ ಇಲಾಖೆಗಳು ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.