ರಹ್ಮಾನ್, ಆಶ್ರಫ್ ಕೊಲೆ: ಸಮಗ್ರ ತನಿಖೆ

ರಹ್ಮಾನ್, ಆಶ್ರಫ್ ಕೊಲೆ: ಸಮಗ್ರ ತನಿಖೆ


ಮಂಗಳೂರು: ಕೊಳತ್ತಮಜಲು ಅಬ್ದುಲ್ ರಹ್ಮಾನ್ ಮತ್ತು ಕುಡುಪುವಿನಲ್ಲಿ ಗುಂಪು ಹತ್ಯೆಗೊಳಗಾದ ಅಶ್ರಫ್ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಒಂದು ವಾರ, ತಿಂಗಳಲ್ಲಿ ಮುಗಿಯುವುದಿಲ್ಲ. ಅದರ ಬುಡಕ್ಕೆ ಹೋಗಬೇಕಾದರೆ ಸಮಗ್ರ ತನಿಖೆಯಾಗಬೇಕು. ಅದನ್ನು ಮಾಡುತ್ತಿದ್ದೇವೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ನಡೆಯಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾವ ಉದ್ದೇಶಕ್ಕೆ ಕೊಲೆಯಾಗಿದೆ, ವೈಯಕ್ತಿಕವೇ, ಕೋಮು ದ್ವೇಷವೇ ಎಂದು ಈಗ ಹೇಳಲಾಗದು. ತನಿಖೆಯ ವರದಿ ಬಂದ ಅನಂತರ ಗೊತ್ತಾಗಲಿದೆ ಎಂದರು. 

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ ಐಎಗೆ ವಹಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹಸಚಿವರು, ಕೇಂದ್ರ ಸರಕಾಕ್ಕೆ ಅದನ್ನು ಎನ್‌ಐಎಗೆ ಪಡೆಯುವ ಅಧಿಕಾರವಿದೆ. ಅವರು ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಅವರಿಗೆ ಕೊಡಲೇಬೇಕಾದ ಪರಿಸ್ಥಿತಿ ಬಂದಿದೆ. ಯಾಕೆ ನಿರ್ದಿಷ್ಟವಾಗಿ ಆ ಕೇಸು ಎನ್‌ಐಎಗೆ ಕೇಳಿದ್ದಾರೆಂದು ಗೊತ್ತಿಲ್ಲ ಎಂದರು. 

ರಹ್ಮಾನ್ ಹತ್ಯೆ ಪ್ರಕರಣವನ್ನು ಎನ್ ಐಎಗೆ ನೀಡುತ್ತೀರಾ ಎಂದು ಕೇಳಿದಾಗ, ಅದನ್ನು ಎನ್‌ಐಎಗೆ ಕೇಳಿಲ್ಲ. ನಮ್ಮ ಪೊಲೀಸರು ತನಿಖೆ ನಡೆಸಲು ಸಮರ್ಥರಿದ್ದಾರೆ. ತನಿಖೆ ನಡೆಯುತ್ತಿದೆ ಎಂದರು. 

ಎಎನ್‌ಎಫ್ ವಿಸರ್ಜನೆ ಇಲ್ಲ..

ರಾಜ್ಯದಲ್ಲಿ ನಕ್ಸಲರು ಶರಣಾಗತರಾಗಿದ್ದಾರೆ. ಹಾಗಾಗಿ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಪ್ರಮಾಣ ಕಡಿಮೆ ಮಾಡಲಾಗಿದೆ. ಸದ್ಯಕ್ಕೆ ಅಗತ್ಯತೆ ಇಲ್ಲದಿದ್ದರೂ ಯಾವುದಾದರೂ ಸಂದರ್ಭದಲ್ಲಿ ಅಗತ್ಯ ಬಂದರೆ ಬೇಕಾಗುತ್ತದೆ. ಹಾಗಾಗಿ ನಕ್ಸಲ್ ನಿಗ್ರಹ ಪಡೆ ವಿಸರ್ಜನೆ ಮಾಡುವುದಿಲ್ಲ. ಒಡಿಶಾ, ಅಸ್ಸಾಂ ಮೊದಲಾದೆಡೆ ನಕ್ಸಲ್ ಚಟುವಟಿಕೆ ಇದೆ. ಅಲ್ಲಿಂದ ಇಲ್ಲಿಗೆ ಬರುವ ಸಾಧ್ಯತೆಯೂ ಇದೆ. ಆ ಸಂದಭರ್ದಲ್ಲಿ ಇಲ್ಲಿ ತಯಾರಿರಬೇಕಾಗುತ್ತದೆ. ಹಾಗಾಗಿ ನಕ್ಸಲ್ ನಿಗ್ರಹ ಪಡೆಯ ಸ್ವಲ್ಪ ಭಾಗವನ್ನು ಹಾಗೆಯೇ ಇರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. 

ಕರಾವಳಿ ಜಿಲ್ಲೆಗಳಲ್ಲಿ ಕೋಮು ಸಂಬಂಧಿ ಚಟುವಟಿಕೆಗಳಿಂದ ಶಾಂತಿ ಕಾಪಾಡುವುದು ವಿಶೇಷ ಕಾರ್ಯಪಡೆಯ ಉದ್ದೇಶ. ಜನ ಅರ್ಥ ಮಾಡಿಕೊಂಡರೆ ಈ ಪಡೆಯ ಅಗತ್ಯತೆ ಕಡಿಮೆಯಾಗುತ್ತದೆ. ಸದ್ಯ ಕಾರ್ಯಪಡೆಯನ್ನು ಸಾಂಕೇತಿಕವಾಗಿ ರಚಿಸಲಾಗಿದೆ ಎಂದವರು ಹೇಳಿದರು. 

ಜಾತಿ ಗಣತಿಯ ಮರು ಸಮೀಕ್ಷೆ ಕುರಿತು ಪ್ರತಿಕ್ರಿಯಿಸಿದ ಸಚಿವ ಜಿ.ಪರಮೇಶ್ವರ್, ಈಗ ನಡೆಸಲಾಗಿರುವ ಸಮೀಕ್ಷೆ ಬಗ್ಗೆ ಕೆಲವು ಸಮುದಾಯಗಳು ಸರಕಾರದ ವಿರುದ್ಧವಾಗಿ ಮಾತನಾಡಿದರು. ಹೈಕಮಾಂಡ್ ನವರು ಕೂಡ ಸರಿಯಾಗಿ ಮಾಡಲು ಸೂಚಿಸಿದ್ದಾರೆ. ಅಲ್ಲದೇ 10 ವರ್ಷದ ಹಿಂದಿನ ಜನಸಂಖ್ಯೆಯ ಮಾಹಿತಿಯನ್ನು ಅದು ಆಧರಿಸಲಾಗಿತ್ತು. ಅನಂತರ ಹೆಚ್ಚಾದ ಜನಸಂಖ್ಯೆಯ ಉಲ್ಲೇಖವಿರಲಿಲ್ಲ. ಹಾಗಾಗಿ ಮರು ಸಮೀಕ್ಷೆಗೆ ತೀರ್ಮಾನ ತೆಗೆದುಕೊಂಡಿದ್ದೇವೆ. ಯಾವ ಸಮುದಾಯಕ್ಕೆ ಅವರ ಜಾತಿಯನ್ನು ಪರಿಗಣಿಸಿಲ್ಲ ಎಂಬ ಆತಂಕವಿದೆಯೋ ಅದನ್ನು ಸರಿಪಡಿಸಲು ಈಗ ಅವಕಾಶ ಸಿಕ್ಕಿದೆ ಎಂದವರು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article