
ವಿಮಾನ ದುರಂತದಲ್ಲಿ ಮಡಿದ ನರ್ಸ್‌ಗೆ ಅವಮಾನ: ಉಪ ತಹಶೀಲ್ದಾರ್ ಅಮಾನತು
ಕಾಸರಗೋಡು: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಕೇರಳ ಮೂಲದ ರಂಜಿತಾ ಜಿ. ನಾಯರ್ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನ ಮಾಡಿದ ವೆಳ್ಳರಿಕುಂಡು ತಾಲೂಕು ಉಪ ತಹಶೀಲ್ದಾರ್ ಎ. ಪವಿತ್ರನ್ ನನ್ನು ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆ ಆದೇಶ ನೀಡಿದೆ.
ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ರವರ ಆದೇಶದಂತೆ ಉಪ ತಹಶೀಲ್ದಾರ್ ಎ. ಪವಿತ್ರನ್ ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಲಂಡನ್‌ನಲ್ಲಿ ನರ್ಸ್ ಆಗಿದ್ದ ಪತ್ತನಂತ್ತಿಟ್ಟದ ರಂಜಿತಾ ಅವರ ಉದ್ಯೋಗ ಹಾಗೂ ಜಾತಿಯನ್ನು ಅವಹೇಳನ ಮಾಡಿ ಪವಿತ್ರನ್ ಫೇಸ್ ಬುಕ್ ಮೂಲಕ ನಿಂದಿಸಿದ್ದರು. ವಿವಾದ ಉಂಟಾಗುತ್ತಿದ್ದಂತೆ ಫೇಸ್ ಬುಕ್ ಪೋಸ್ಟ್‌ನ್ನು ಡಿಲಿಟ್ ಮಾಡಿದ್ದರು. ಈ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಕೆ.ಇಂಪಾಶೇಖರ್ ಗೆ ರಾಜ್ಯ ಕಂದಾಯ ಸಚಿವ ಕೆ.ರಾಜನ್ ಆದೇಶ ನೀಡಿದ್ದರು. ಇದರಂತೆ ಪವಿತ್ರನ್ ನನ್ನು ಅಮಾನತುಗೊಳಿಸಲಾಗಿದೆ.
ಈ ಹಿಂದೆ ಕೂಡಾ ಪವಿತ್ರನ್ ಇಂತಹ ಹಲವು ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಈ ಬಗ್ಗೆ ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ ಮುನ್ನೆಚ್ಚರಿಕೆ ನೀಡಿದ್ದರು.
ಕಾಞಿಂಗಾಡ್ ಶಾಸಕ ಇ. ಚಂದ್ರಾಶೇಖರ್ ಅವರನ್ನು ನಿಂದಿಸಿದಕ್ಕಾಗಿ ಅಮಾನತುಗೊಳಿಸಲಾಗಿತ್ತು. ಎರಡು ತಿಂಗಳ ಬಳಿಕ ಮುನ್ನೆಚ್ಚರಿಕೆ ನೀಡಿ ಸೇವೆಗೆ ಮರು ಸೇರ್ಪಡೆಗೊಳಿಸಲಾಗಿತ್ತು. ಅಮಾನತು, ಮುನ್ನೆಚ್ಚರಿಕೆ ನೀಡಿದರೂ ನಿರಂತರವಾಗಿ ಕಂದಾಯ ಇಲಾಖೆ ಹಾಗೂ ವೈಯುಕ್ತಿಕವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ನಿಂದನೆ ನಡೆಸುತ್ತಿರುವದರಿಂದ ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಸರಕಾರ ಉಪ ತಹಶೀಲ್ದಾರ್ ಪವಿತ್ರನ್ ನನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ನೀಡಿದೆ.