
ಬಿಜೆಪಿ ರಾಜ್ಯಧ್ಯಕ್ಷರು, ಪ್ರತಿಪಕ್ಷ ನಾಯಕರ ನಿಯೋಗ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ
ಮಂಗಳೂರು: ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಹತ್ಯೆ ಪ್ರಕರಣಗಳು, ಉದ್ವಿಗ್ನ ವಾತಾವರಣ, ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ತೋರುತ್ತಿರುವ ಇಬ್ಬಗೆ ನೀತಿಗಳು, ಮುಸ್ಲಿಂ ಮುಖಂಡರ ರಾಜೀನಾಮೆ ನಾಟಕಕ್ಕೆ ಬೆದರಿ ಅಲ್ಪಸಂಖ್ಯಾತರ ಒಲೈಕೆಗಾಗಿ ಅನಗತ್ಯವಾಗಿ ಹಿಂದೂ ಮುಖಂಡರ ಮೇಲೆ ಎಫ್‌ಐಆರ್ ದಾಖಲು, ರಾತ್ತಿ ಹೊತ್ತಲ್ಲಿ ಪೊಲೀಸರು ಮನೆಗೆ ನುಗ್ಗಿ ತನಿಖೆ ನೆಪದಲ್ಲಿ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿರುವುದು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರ ಮನೆಗೆ ಪ್ರವೇಶಿಸಿ ಫೋಟೋ ತೆಗೆಸುವ ಮೂಲಕ ಮಾನಸಿಕ ಹಿಂಸೆ ನೀಡುವ ಘಟನೆಗಳು ವ್ಯಾಪಕವಾಗಿ ನಡೆಯುತ್ತಿದೆ.
ಕಾಂಗ್ರೆಸ್ ಸರ್ಕಾರ ಜಿಲ್ಲೆಯಲ್ಲಿ ಪ್ರತಿಪಕ್ಷ ಮತ್ತು ಹಿಂದೂ ಸಂಘಟನೆಯನ್ನು ಬಲಹೀನ ಗೊಳಿಸುವ ಷಡ್ಯಂತ್ರಕ್ಕೆ ಪೊಲೀಸ್ ಇಲಾಖೆಯನ್ನು ಬಳಸುತ್ತಿರುವುದು, ರಾಜ್ಯದಲ್ಲಿ ಗೃಹಸಚಿವರು ಇದ್ದಾರೆ ಎನ್ನುವುದನ್ನು ನಂಬಲಾಗದ ಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ, ಕಾನೂನಿನ ದುರ್ಭಳಕೆ ಮಾಡಿ ಏಕಪಕ್ಷೀಯವಾಗಿ ನಡೆಸುತ್ತಿರುವ ಬಲವಂತದ ಕ್ರಮಗಳು ಈ ಎಲ್ಲಾ ಘಟನಾವಳಿಗಳ ಬಗ್ಗೆ ಪರಾಮರ್ಶೆ ಮತ್ತು ಪರಿಶೀಲನೆ ನಡೆಸಲು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ, ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದ ನಿಯೋಗದ ಜತೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ವಿಧಾನ ಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕರು, ರಾಜ್ಯ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿಗಳಾದ ವಿ. ಸುನೀಲ್ ಕುಮಾರ್, ವಿಧಾನ ಪರಿಷತ್‌ನ ವಿಪಕ್ಷದ ಮುಖ್ಯ ಸಚೇತಕ ಎನ್. ರವಿ ಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಜೂ.೯ ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಈ ಸಂಧರ್ಭದಲ್ಲಿ ಸಂಸದರು, ಶಾಸಕರುಗಳು ಮತ್ತು ಪಕ್ಷದ ಪ್ರಮುಖರ ಜತೆಯಲ್ಲಿ ಸಭೆಯನ್ನು ನಡೆಸಿದ್ದು, ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾಹಿತಿಯನ್ನು ಪಡೆಯಲಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.