
ಲೀಡ್ ಬ್ಯಾಂಕ್ ಸಭೆ: ಕೇಂದ್ರ ಯೋಜನೆ, ಸಾಮಾಜಿಕ ಭದ್ರತಾ ಸ್ಕೀಮ್ ತ್ರೈಮಾಸಿಕ ಕ್ರಿಯಾ ಯೋಜನೆಗೆ ಸಂಸದರು ಸೂಚನೆ
ಮಂಗಳೂರು: ಕೇಂದ್ರ ಸರ್ಕಾರದ ಯೋಜನೆ ಹಾಗೂ ಸಾಮಾಜಿಕ ಭದ್ರತಾ ಸ್ಕೀಮ್‌ಗಳ ಅನುಷ್ಠಾನಕ್ಕೆ ಸಂಬಂಧಿಸಿ ತ್ರೈಮಾಸಿಕ ಅವಧಿಯ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ದ.ಕ. ಜಿಲ್ಲೆಯ ಬ್ಯಾಂಕ್ ಮುಖ್ಯಸ್ಥರುಗಳಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ಜಿ.ಪಂ. ಸಿಇಒ ಡಾ.ಆನಂದ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸಾಮಾಜಿಕ ಭದ್ರತಾ ಸ್ಕೀಮ್‌ಗಳ ಗುರಿ ಸಾಧಿಸುವಲ್ಲಿ ಜಿಲ್ಲೆಯ ಬ್ಯಾಂಕ್‌ಗಳು ಹಿನ್ನಡೆ ಕಂಡಿರುವ ಕುರಿತಂತೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಸಾಧಿಸುವ ಗುರಿಯ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಅದರ ವರದಿಯನ್ನು ನನಗೆ, ಜಿ.ಪಂ. ಸಿಇಒ, ಆರ್‌ಬಿಐ ಅಧಿಕಾರಿಗಳಿಗೆ ಸಲ್ಲಿಸುವಂತೆ ಅವರು ಹೇಳಿದರು.
ಉದ್ಯಮ ಕಾರ್ಯಾಗಾರ..
ಪ್ರಧಾನಮಂತ್ರಿ ಜನಧನ್ ಯೋಜನೆ(ಪಿಎಂಜೆಡಿವೈ), ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನ ಮಂತ್ರಿ ಸುರಕ್ಷಭಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಹಾಗೂ ಅಂಟಲ್ ಪಿಂಚಣಿ ಯೋಜನೆ (ಎಪಿವೈ) ಅಡಿಯಲ್ಲಿ ಎಸ್ಸಿ ಎಸ್ಟಿ ಮಹಿಳಾ ಫಲಾನುಭವಿಗಳು ಹಾಗೂ ಮಧ್ಯಮ, ಸಣ್ಣ, ಅತೀ ಸಣ್ಣ ಉದ್ದಿಮೆದಾರರ (ಎಂಎಸ್‌ಎಂಇ) ಸೌಲ ಸೌಲಭ್ಯಕ್ಕೆ ಸಂಬಂಧಿಸಿ ಬ್ಯಾಂಕ್‌ಗಳು ಆದ್ಯತೆಯನ್ನು ನೀಡಬೇಕು. ಈ ಉದ್ದಿಮೆದಾರರಿಗೆ ಜುಲೈ ತಿಂಗಳಲ್ಲಿ ಮಂಗಳೂರಿನಲ್ಲಿ ಉದ್ಯಮ ತರಬೇತಿ ಕಾರ್ಯಾಗಾರ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲಿಸಿದ ಜಿ.ಪಂ.ಸಿಇಒ ಡಾ.ಆನಂದ್, ಬ್ಯಾಂಕ್ಗಳು ನಿಗದಿತ ಗುರಿ ಸಾಧನೆಗೆ ತೀವ್ರ ಪ್ರಯತ್ನ ನಡೆಸಬೇಕು. ಲೀಡ್ ಬ್ಯಾಂಕ್ ಸಭೆಯಲ್ಲಿ ಸೂಚಿಸಿದ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಶಾಖಾ ಮಟ್ಟದಲ್ಲಿ ಮಾಹಿತಿ ರವಾನೆಯಾಗಬೇಕು. ಇಲ್ಲದಿದ್ದರೆ ಯೋಜನೆಗಳ ಗುರಿ ಸಾಧಿಸಲು ಸಾಧ್ಯವಾಗದು. ಫಲಾನುಭವಿಗಳ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ವಿಳಂಬಿಸಿದರೆ ಅಥವಾ ವೃಥಾ ತಿರಸ್ಕರಿಸಿದರೆ ಬ್ಯಾಂಕ್‌ಗಳ ಕಾರ್ಯವೈಖರಿ ಬಗ್ಗೆ ಗ್ರಾಹಕರು ಮೂಗು ಮುರಿಯುವಂತೆ ಆಗಬಹುದು. ಈ ಬಗ್ಗೆ ಬ್ಯಾಂಕ್ಗಳು ಎಚ್ಚರಿಕೆ ವಹಿಸಬೇಕು. ಫಲಾನುಭವಿ ಗ್ರಾಹಕರ ಹಿತ ಕಾಪಾಡುವಲ್ಲಿಯೂ ಬ್ಯಾಂಕ್ಗಳು ದೃಢ ಹೆಜ್ಜೆ ಇರಿಸಬೇಕು ಎಂದು ಹೇಳಿದರು.
ಗ್ಯಾರಂಟಿ ಬೇಡ..
ಸ್ವಸಹಾಯ ಸಂಘಗಳ ಸದಸ್ಯರಿಗೆ ವೈಯಕ್ತಿಕ ಸ್ವಉದ್ಯೋಗಕ್ಕೆ ಸಾಲ ನೀಡುವಾಗ ಬ್ಯಾಂಕ್‌ಗಳು 2 ಲಕ್ಷ ರೂ. ವರೆಗೆ ಯಾವುದೇ ಗ್ಯಾರಂಟಿಗೆ ಷರತ್ತು ಹಾಕುವಂತಿಲ್ಲ ಎಂದು ಆರ್‌ಬಿಐ ಸೂಚನೆ ನೀಡಿದೆ. ಹೀಗಿದ್ದೂ ಕೆಲವು ಬ್ಯಾಂಕ್ಗಳು ಕೊಟೇಷನ್ ಸಹಿತ ಗ್ಯಾರಂಟಿ ನೀಡುವಂತೆ ಷರತ್ತು ವಿಧಿಸಿ ಸಾಲ ನೀಡಿಕೆಯಲ್ಲಿ ವಿಳಂಬಕ್ಕೆ ಕಾರಣವಾಗಿದ್ದಾರೆ. ಈ ಕುರಿತು ಬ್ಯಾಂಕ್ಗಳಿಗೆ ನಿರ್ದೇಶನ ನೀಡುವಂತೆ ಸಿಇಒ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿಸುವ ಸ್ವಸಹಾಯ ಗುಂಪುಗಳಿಗೆ 10 ಲಕ್ಷ ರೂ. ವರೆಗೆ ಸಾಲ ನೀಡಲು ಅವಕಾಶ ಇದೆ ಎಂದು ನಬಾರ್ಡ್ ಡಿಜಿಎಂ ಸಂಗೀತಾ ತಿಳಿಸಿದರು.
1,31,943.04 ಕೋಟಿ ವ್ಯವಹಾರ..
ಮಾರ್ಚ್ ಅಂತ್ಯಕ್ಕೆ ದ.ಕ. ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ವ್ಯವಹಾರ 1,31,943.04 ಕೋಟಿ ರೂ. ಆಗಿದ್ದು, ವಾರ್ಷಿಕ ಶೇ. 8.48ರ ಬೆಳವಣಿಗೆ ದಾಖಲಿಸಿದೆ ಎಂದು ಲೀಡ್ ಬ್ಯಾಂಕ್ ಮೆನೇಜರ್ ಕವಿತಾ ಹೇಳಿದರು.
ಮಾರ್ಚ್ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು ಬ್ಯಾಂಕ್ ಶಾಖೆಗಳ ಸಂಖ್ಯೆ 663 ಆಗಿದೆ. ಜಿಲ್ಲೆಯ ಬ್ಯಾಂಕ್‌ಗಳ ಒಟ್ಟು ಠೇವಣಿ 76,344.19 ಕೋಟಿ ರೂ. ಆಗಿದ್ದು, ಶೇ. 7.54 ಬೆಳವಣಿಗೆ ಕಂಡಿದೆ. ಒಟ್ಟು ಸಾಲ 55,595.5 ಕೋಟಿ ರೂ. ಆಗಿದ್ದು, ಶೇ.9.80ರ ಬೆಳವಣಿಗೆ ದಾಖಲಿಸಿದೆ. ಸಾಲದ ಠೇವಣಿ ಅನುಪಾತ ಶೇ.71.33 ಆಗಿದೆ ಎಂದರು.
ಆದ್ಯತಾ ಮತ್ತು ಆದ್ಯತೇತರ ವಲಯಗಳಲ್ಲಿ ಒಟ್ಟು 58,849.62 ಕೋಟಿ ರೂ. ಸಾಲ ವಿತರಿಸಿದ್ದು, ತ್ರೈಮಾಸಿಕ ಗುರಿಯಾದ 55,532.13 ಕೋಟಿ ರೂ. ಗುರಿ ಮೀರಿ ಶೇ. 109.93 ನಿರ್ವಹಣೆ ಸಾಧಿಸಿದೆ ಎಂದರು.
ಕೆನರಾ ಬ್ಯಾಂಕ್ ಡಿಜಿಎಂ ಶೈಲೇಂದ್ರ, ಆರ್‌ಬಿಐ ಎಜಿಎಂ ಅರುಣ್ ಇದ್ದರು.