
ಗಂಗೊಳ್ಳಿ-ನಿರಂತರ ಜಾನುವಾರು ಕಳವು: ಪೊಲೀಸರ ಜಾಣ ಕುರುಡು
ಕುಂದಾಪುರ: ಗಂಗೊಳ್ಳಿ ಸುತ್ತಮುತ್ತಲಿನ ಪರಿಸರದಲ್ಲಿ ರಾತ್ರಿ ವೇಳೆ ದನಗಳ ಕಳ್ಳತನ ಹೆಚ್ಚಾಗುತ್ತಿದ್ದು, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಹಿಂದು ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಕಳೆದ ಮೂರ‍್ನಾಲ್ಕು ದಿನಗಳ ಹಿಂದೆ ಗಂಗೊಳ್ಳಿ ಮೆಸ್ಕಾಂ ಶಾಖೆ ಎದುರು ಮಲಗಿದ್ದ ದನವನ್ನು ರಾತ್ರಿ ವೇಳೆ ಕಳವು ಮಾಡಲಾಗಿದೆ. ಪ್ರತ್ಯಕ್ಷದರ್ಶಿಯೊಬ್ಬರು ಈ ಬಗ್ಗೆ ಗಂಗೊಳ್ಳಿ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಗಂಗೊಳ್ಳಿಯ ಬಂದರು, ರಥಬೀದಿ, ಮ್ಯಾಂಗನೀಸ್ ರಸ್ತೆ, ಕಾಲೇಜು ಮೈದಾನ, ಬಾವಿಕಟ್ಟೆ ಮೊದಲಾದ ಕಡೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅನೇಕ ದನಗಳನ್ನು ರಾತ್ರೋರಾತ್ರಿ ಕಳವು ಮಾಡಲಾಗಿದೆ. ಆದರೆ ಘಟನೆಯನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ಜಾನುವಾರು ಕಳ್ಳತನದ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಇದರಿಂದ ಜಾನುವಾರು ಕಳ್ಳತನ ವಿಪರೀತವಾಗಿದೆ.
ಜಾನುವಾರು ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳದಿದ್ದಲ್ಲಿ ಹಾಗೂ ಜಾನುವಾರು ಕಳ್ಳತನ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ಮುಂದುವರಿದಲ್ಲಿ ಸಮಸ್ತ ಹಿಂದು ಸಮಾಜಬಾಂಧವರನ್ನು ಸೇರಿಕೊಂಡು ಬೀದಿಗಿಳಿದು ಹೋರಾಟ ನಡೆಸುವುದಾಗಿ ಹಿಂದು ಜಾಗರಣ ವೇದಿಕೆ ಮುಖಂಡ ನವೀನ್ ಗಂಗೊಳ್ಳಿ ಪತ್ರಿಕಾ ಹೇಳಿಕೆ ಮೂಲಕ ಎಚ್ಚರಿಸಿದ್ದಾರೆ.