
ಓಎಲ್ ಎಕ್ಸ್‌ನಲ್ಲಿ ಕಾರು ಮಾರಾಟದ ಹೆಸರಲ್ಲಿ ವಂಚನೆ: ಬಂಧನ
ಮಂಗಳೂರು: ಓಎಲ್ ಎಕ್ಸ್‌ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ಬಳಿಕ ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಸಮೀಪದ ಸೊರಬ ನಿವಾಸಿ ರವಿಚಂದ್ರ ಮಂಜುನಾಥ ರೇವಣಕರ (29) ಬಂಧಿತ ಆರೋಪಿಯಾಗಿದ್ದಾನೆ. ಈತನು ಓಎಲ್‌ಎಕ್ಸ್‌ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ 2.50 ಲಕ್ಷ ರೂ. ಪಡೆದು ವಂಚನೆ ಮಾಡಿದ್ದ. ಈ ಬಗ್ಗೆ ಶನಿವಾರ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಆರೋಪಿಯು ಹೊಸಪೇಟೆಯಲ್ಲಿರುವ ಬಗ್ಗೆ ಮಾಹಿತಿ ತಿಳಿದು ಬಂದಿತ್ತು. ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರು ಹೊಸಪೇಟೆಯಿಂದ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ಬೇರೆ ಬೇರೆ ಬ್ಯಾಂಕ್‌ಗಳಲ್ಲಿ 21 ಖಾತೆಗಳನ್ನು ಹೊಂದಿದ್ದು, 8 ಸಿಮ್ ಕಾರ್ಡ್‌ಗಳು ಬಳಕೆ ಮಾಡಿರುವುದು ತನಿಖೆಯ ವೇಳೆ ತಿಳಿದು ಬಂದಿದೆ. 8 ಮೊಬೈಲ್ ನಂಬರ್‌ಗಳ ಮೇಲೆ 80ಕ್ಕೂ ಹೆಚ್ಚಿನ ಸೈಬರ್ ವಂಚನೆ ದೂರುಗಳು ದಾಖಲಾಗಿದೆ ಎನ್ನಲಾಗಿದೆ. ಆರೋಪಿಯು 3 ವರ್ಷಗಳಿಂದ ಓಎಲ್‌ಎಕ್ಸ್‌ನಲ್ಲಿ ಕಾರು ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ತಾನು ಉಪಯೋಗಿಸುತ್ತಿದ್ದ ಮೊಬೈಲನ್ನು ಕೆಲವು ದಿನಗಳ ಬಳಿಕ ಮಾರಾಟ ಮಾಡುತ್ತಿದ್ದು, ಹೊಸ ಸಿಮ್‌ಗಳನ್ನು ಬಳಸುತ್ತಿದ್ದ ಎನ್ನಲಾಗಿದೆ.