
ಮುಲ್ಕಿಯಲ್ಲಿ ತಲೆ ಎತ್ತಿ ನಿಂತ ತಾಲೂಕು ಆಡಳಿತ ಸೌಧ: ಉಳ್ಳಾಲದಲ್ಲಿ ಮರಿಚಿಕೆ
Sunday, June 8, 2025
ಮಂಗಳೂರು: 2019ರ ಪ್ರಾರಂಭದಲ್ಲೇ ಕರ್ನಾಟಕ ರಾಜ್ಯ ಸರಕಾರದ ಆದೇಶದಂತೆ ಉಳ್ಳಾಲ ಹಾಗೂ ಮುಲ್ಕಿ ತಾಲೂಕುಗಳು ರಚನೆಯಾಗಿದೆ. ಇಲ್ಲಿ ಮುಲ್ಕಿ ತಾಲೂಕು ರಚನೆಯಾಗುವಲ್ಲಿ ಅಲ್ಲಿನ ಜನತೆಯ ಧ್ವನಿ ಪ್ರಬಲವಾಗಿತ್ತು. ಇದರಿಂದಾಗಿ ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರಕಾರವೂ ಕೂಡ ಮುಂದಡಿ ಇಟ್ಟಿತು. ಇದರ ಭಾಗವಾಗಿಯೇ ಮುಲ್ಕಿಯಲ್ಲಿ ನೂತನ ತಾಲೂಕು ಕಚೇರಿ (ಪ್ರಜಾಸೌಧ) ತಲೆಎತ್ತಿ ನಿಂತಿದೆ.
ಆದರೆ ಉಳ್ಳಾಲ ತಾಲೂಕು ರಚನೆಯಾಗಬೇಕೆಂದು ಸ್ಥಳೀಯರ ಕೂಗೇ ಇರಲಿಲ್ಲ. ಯಾಕೆಂದರೆ ಎಲ್ಲರಿಗೂ ಮಂಗಳೂರೇ ತುಂಬಾ ಅನುಕೂಲಕರವಾಗಿತ್ತು. ಆದರೆ ಸ್ಥಳೀಯ ಶಾಸಕರ ಒಣಪ್ರತಿಷ್ಠೆಗೆ ಬೇಕಾಗಿ ಉಳ್ಳಾಲ ತಾಲೂಕು ರಚನೆಯಾಯಿತು. ಆರು ವರ್ಷಗಳು ಕಳೆದರೂ ಇನ್ನೂ ಕೂಡ 32 ವಿವಿಧ ಇಲಾಖೆಗಳನ್ನು ಒಳಗೊಂಡ ತಾಲೂಕು ಕಚೇರಿ ನಿರ್ಮಾಣವಾಗಿಲ್ಲ.
ಆರು ಬಾರಿ ಮಂಡನೆಯಾದ ಬಜೆಟ್ ನಲ್ಲಿ ನೂತನ ಕಟ್ಟಡದ ಪ್ರಸ್ತಾಪವೇ ಇಲ್ಲದಿರುವುದು ದುರಾದ್ರ ಷ್ಟಕರ.ಮಾತ್ರವಲ್ಲ ಕಳೆದ ಆರು ವರ್ಷಗಳಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಕೂಡ ಒದಗಿಸಲು ಸಾಧ್ಯವಾಗಿಲ್ಲ.
ಕನಿಷ್ಠ ಪಕ್ಷ ಉಳ್ಳಾಲ ತಾಲೂಕಿನ ನಾಗರಿಕರಿಗೆ ತಮ್ಮ ವಿಳಾಸವನ್ನು ಬರೆಯುವಾಗ ಉಳ್ಳಾಲ ತಾಲೂಕು ಬರೆಯಬೇಕೋ ಮಂಗಳೂರು ತಾಲೂಕು ಬರೆಯಬೇಕೋ ಎಂಬ ಗೊಂದಲವಿದೆ. ಇನ್ನಾದರೂ ಮುಂದಿನ ದಿನಗಳಲ್ಲಿ ಉಳ್ಳಾಲ ತಾಲೂಕಿಗೆ ಕಾಯಕಲ್ಪ ನೀಡಲಾಗುವುದೇ ಎಂಬುದನ್ನು ಕಾದು ನೋಡಬೇಕು ಎಂದು ನಾಗರಿಕ ಹೋರಾಟಗಾರ ಸುನಿಲ್ ಕುಮಾರ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.