
ಮೊಬೈಲ್ ಬಳಕೆ: ಜಿಲ್ಲೆಯ ಐದು ಸಾವಿರ ಮಕ್ಕಳಿಗೆ ಕನ್ನಡಕ
ಮಂಗಳೂರು: ದ.ಕ. ಜಿಲ್ಲೆಯ ಶಾಲಾ ಮಕ್ಕಳಲ್ಲಿ ದೃಷ್ಟಿದೋಷ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಆಘಾತಕಾರಿ ಅಂಶ ವರದಿಯಾಗಿದೆ. ಜಿಲ್ಲೆಯ ಸುಮಾರು ಆರು ಸಾವಿರ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಕಂಡು ಬಂದಿದ್ದು, ಅಂದಾಜು ಐದು ಸಾವಿರ ಮಕ್ಕಳಿಗೆ ಕನ್ನಡಕದ ಅನಿವಾರ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮಕ್ಕಳಲ್ಲಿ ಅತಿಯಾದ ಮೊಬೈಲ್ ಫೋನ್ ಬಳಕೆಯೇ ಇದಕ್ಕೆ ಕಾರಣ ಎಂದು ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.
ಅಂದಾಜು 6ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ದೃಷ್ಟಿ ದೋಷ ಪ್ರಕರಣ ಹೆಚ್ಚಾಗಿದೆ. ಕೆಲವು ಮಕ್ಕಳಲ್ಲಿ ಸಾಮಾನ್ಯ ದೃಷ್ಟಿದೋಷವಿದ್ದರೆ, ಇನ್ನು ಕೆಲವು ಮಕ್ಕಳಲ್ಲಿ ಚಿಕಿತ್ಸೆ ಅನಿವಾರ್ಯ ಎಂಬಷ್ಟರ ಮಟ್ಟಿಗೆ ದೃಷ್ಟಿದೋಷ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊಬೈಲ್ ಫೋನ್‌ಗಳನ್ನು ಮಿತವಾಗಿ ಬಳಸುವಂತೆ ಪೋಷಕರು ಆಗಾಗ ಮಕ್ಕಳಿಗೆ ಸೂಚನೆ ನೀಡುತ್ತಿದ್ದರೂ ಅದನ್ನು ನಿರ್ಲಕ್ಷಿಸಿದ ಪರಿಣಾಮ ಕಣ್ಣಿನ ಸಮಸ್ಯೆ ಹೆಚ್ಚಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ ಮಕ್ಕಳ ಮೊಬೈಲ್ ಫೋನ್ ಚಟವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ‘ಮನೋಸ್ಥೈರ್ಯ’ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿಕ್ಷಣ ಇಲಾಖೆ ಕೂಡ ಇದಕ್ಕೆ ಸಂಬಂಧಿಸಿ ಅಧಿಕಾರಿಗಳನ್ನು ನೇಮಕ ಮಾಡಿದೆ. ಅಲ್ಲದೆ ಕಾರ್ಯಾಗಾರವನ್ನೂ ಏರ್ಪಡಿಸಿದೆ. ಆದರೂ ಮಕ್ಕಳಲ್ಲಿ ಮೊಬೈಲ್ ವ್ಯಾಮೋಹ ನಿಯಂತ್ರಣಕ್ಕೆ ಬಂದಿಲ್ಲ ಎನ್ನಲಾಗಿದೆ.