
ಅಮೇರಿಕಾದ ಎಎಟಿಎ ಸಮಾವೇಶಕ್ಕೆ ನಿಟ್ಟೆ ವಿವಿ ಡಾ. ಸಾಯಿಗೀತಾ ವಿಶೇಷ ಅತಿಥಿ
ಮಂಗಳೂರು: ಅಖಿಲ ಅಮೇರಿಕಾ ತುಳುವೆರೆ ಅಂಗಣದ (ಎಎಟಿಎ) ಮೊದಲ ಸಮಾವೇಶವು ಅಮೇರಿಕಾದ ನಾರ್ತ್ ಕ್ಯಾರೊಲಿನಾದ ರಾಲಿ ನಗರದಲ್ಲಿ ನಡೆಯಲಿದ್ದು, ಅದರಲ್ಲಿ ವಿಶೇಷ ಅತಿಥಿಯಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ಡಾ. ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಂಯೋಜಕಿ ಹಾಗೂ ಮಾನವಿಕ ವಿಭಾಗದ ಪ್ರಭಾರ ಮುಖ್ಯಸ್ಥೆಯಾಗಿರುವ ಡಾ. ಸಾಯಿಗೀತಾ ಭಾಗವಹಿಸಲಿದ್ದಾರೆ.
ಮೂರು ದಿನ ನಡೆಯಲಿರುವ ಈ ಸಮಾವೇಶದಲ್ಲಿ ಅಮೇರಿಕಾ ಹಾಗೂ ಕೆನಡಾದಲ್ಲಿರುವ ತುಳು ಸಂಘಟನೆಗಳೆಲ್ಲವೂ ಜೊತೆಗೂಡಲಿದ್ದು, ಭಾರತದಿಂದ ಕರ್ನಾಟಕದ ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯದಿಂದ ಡಾ. ಸಾಯಿಗೀತಾ ಹೆಗ್ಡೆ, ಕತಾರ್‌ನಿಂದ ಅನಿವಾಸಿ ಭಾರತೀಯ ರವಿ ಶೆಟ್ಟಿ ಮೂಡಂಬೈಲು ಹಾಗೂ ಅಮೇರಿಕಾದ ಶೇಖರ್ ನಾಯ್ಕ ಅವರು ವಿಶೇಷ ಅತಿಥಿಗಳಾಗಿದ್ದಾರೆ.
ಡಾ. ಸಾಯಿಗೀತಾ ಹೆಗ್ಡೆ ತುಳು-ಕನ್ನಡಗಳಲ್ಲಿ ಸಂಶೋಧಕರಾಗಿ, ಸಾಹಿತಿಯಾಗಿ, ಅನುವಾದಕರಾಗಿದ್ದು ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತುಳು ಭಾಷೆಯಲ್ಲಿ ಬರೆಯಲ್ಪಟ್ಟ ಮೊದಲ ತುಳು ಪಿಎಚ್‌ಡಿ ಪ್ರೌಢಪ್ರಬಂಧ ‘ತುಳುವ ಪರಿಪುಡು ಪೊಣ್ಣಮೂಲ ಕಟ್ಟ್’ ಮೂಲಕ ತುಳು ಸಂಶೋಧನಾ ಕ್ಷೇತ್ರದಲ್ಲಿ ಹೊಸ ಮಾರ್ಗವೊಂದನ್ನು ತೆರೆದಿದ್ದಾರೆ. ತುಳು ಪದಕೋಶಗಳ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿರುವ ತುಳು ಜ್ಞಾತಿಪದ ಸಂಚಯವನ್ನು ಡಾ. ಪದ್ಮನಾಭ ಕೇಕುಣ್ಣಾಯರೊಡನೆ ಸಂಪಾದಿಸಿರುವ ಇವರು ಈಗಾಗಲೇ ತಮಿಳಿನ ನೀತಿಕಾವ್ಯ ‘ತಿರುಕ್ಕುರಳ್’ ಹಾಗೂ ತಮಿಳು ವ್ಯಾಕರಣ ‘ತೊಲ್ಕಾಪ್ಪಿಯಂ’ ಕೃತಿಗಳನ್ನು ತುಳುವಿಗೆ ಅನುವಾದಿಸಿದ್ದಾರೆ. ಇನ್ನೂ ಹಲವು ಕೃತಿಗಳ ಅನುವಾದ ಯೋಜನೆ ಕೊರಗ ಹಾಗೂ ಕೊಡವ ಭಾಷೆ-ಸಂಸ್ಕೃತಿಗಳ ಸಂಶೋಧನಾ ಯೋಜನೆಗಳು ಮುನ್ನಡೆಯುತ್ತಿವೆ.