ಮಾದಕ ವ್ಯಸನದಿಂದ ದೂರವಿರಿ: ಅನಂತ ಪದ್ಮನಾಭ

ಮಾದಕ ವ್ಯಸನದಿಂದ ದೂರವಿರಿ: ಅನಂತ ಪದ್ಮನಾಭ


ಮಂಗಳೂರು: ಧೂಮಪಾನ ಮದ್ಯಪಾನಗಳಿಗೂ ಮೀರಿ ಇಂದು ನಾನಾ ರೂಪಗಳಲ್ಲಿ ಆಕರ್ಷಣೀಯವಾಗಿ ದೊರಕುತ್ತಿರುವ ವಿವಿಧ ಮಾದಕ ವಸ್ತುಗಳು ಯುವಜನತೆಯ ಆರೋಗ್ಯ, ಶಿಕ್ಷಣ ಹಾಗೂ ಒಟ್ಟು ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ತಾವು ಇದರಿಂದ ದೂರವಿರುವುದರ ಜೊತೆಗೆ ಇತರನ್ನೂ ಜಾಗೃತಗೊಳಿಸಿ ಎಂದು ಮಂಗಳೂರು ಕದ್ರಿ ಪೊಲೀಸ್ ಠಾಣಾ ಪೊಲೀಸ್ ಅಧೀಕ್ಷಕ ಅನಂತ ಪದ್ಮನಾಭ ಹೇಳಿದರು. 

ನಂತೂರಿನ ನಿಟ್ಟೆ ಡಾ. ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕ ಏರ್ಪಡಿಸಿದ್ದ ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. 

ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ಈಗಿನ ಯುವ ಜನತೆಯಲ್ಲಿ ಏಕಾಗ್ರತೆ ಕಡಿಮೆಯಾಗಿದೆ. ಚಂಚಲ ಮನಸ್ಸು ಅನೇಕ ಆಕರ್ಷಣೆಗಳತ್ತ ವಾಲುತ್ತಿರುತ್ತದೆ. ಹದಿ ಹರೆಯದಲ್ಲಿ ಸಹವಾಸ ದೋಷಗಳಿಂದಾಗಿ ಒಳ್ಳೆಯ ವಿಷಯಗಳಿಗೂ ಮಿಗಿಲಾಗಿ ಕೆಟ್ಟಚಟಗಳತ್ತಲೇ ವಿದ್ಯಾರ್ಥಿಗಳು ಹೊರಳುತ್ತಿರುವುದು ಆತಂಕಕಾರಿ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಡಾ. ನವೀನ್ ಶೆಟ್ಟಿ ಕೆ. ಮಾತನಾಡಿ, ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ತುಂಬ ಅಗತ್ಯವಾದುದು ಏಕೆಂದರೆ ಈ ಚಟವನ್ನು ಮೈಗೂಡಿಕೊಳ್ಳುವ ಸಂದರ್ಭಗಳು ಎದುರಾಗುವುದು ಹದಿಹರೆಯದಲ್ಲಿ ಹಾಗೂ ವಿದ್ಯಾರ್ಥಿ ಜೀವನದಲ್ಲಿ. ಯುವ ಜನತೆಯೇ ಈ ಮಾದಕ ವ್ಯಸನ ಜಾಲದ ಗುರಿಯಾಗಿರುವುದು ದುರಂತ. ಹಾಗಾಗಿ ಒಂದೊಮ್ಮೆ ಈ ಚಟಕ್ಕೆ ಬಲಿಯಾದರೆ ವಿದ್ಯಾರ್ಥಿಯ ಶಿಕ್ಷಣ, ಭವಿಷ್ಯ ಎಲ್ಲವನ್ನೂ ಬಿಟ್ಟು ಉದಾಸೀನತೆ, ಖಿನ್ನತೆ, ನಿರ್ಲಿಪ್ತತೆಗೆ ಗುರಿಯಾಗಿ ಬದುಕನ್ನೇ ಹಾಳು ಮಾಡಿಕೊಳ್ಳುತ್ತಾರೆ. ಶಾಲಾ ಕಾಲೇಜು ಹಂತದಲ್ಲೇ ಈ ಬಗ್ಗೆ ಅರಿವು ಮೂಡಿಸುವುದರಿಂದ ಈ ಪಿಡುಗಿನಿಂದ ಪಾರಾಗಬಹುದು ಎಂದರು. 

ಕದ್ರಿ ಠಾಣಾ ಎ.ಎಸ್.ಐ ಸುಧಾಕರ್ ರಾವ್, ಸಿಬ್ಬಂದಿಗಳಾದ ಚಂದ್ರಾವತಿ, ಮಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು. 

ರಾಷ್ಟ್ರೀಯ ಸೇವಾ ಯೋಜಾನಾಧಿಕಾರಿ ಸಂತೋಷ್ ಶೆಟ್ಟಿ ಸ್ವಾಗತಿಸಿ, ಉಪಯೋಜಾನಾಧಿಕಾರಿ ವಿದ್ಯಾರಾಣಿ ಆಳ್ವ ವಂದಿಸಿದರು. ಟಿ.ವಿ. ಗಿರಿ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article