
ಜಮ್ಮು ರೈಲು ಪುನರಾರಂಭಕ್ಕೆ ಅನ್‌ಲೈನ್ ಸಹಿ ಸಂಗ್ರಹ
ಮಂಗಳೂರು: ಮಂಗಳೂರಿನಿಂದ ಜಮ್ಮು ಕತ್ರಾಕ್ಕೆ ಸಂಚರಿಸುತ್ತಿದ್ದ ನವಯುಗ ಎಕ್ಸ್‌ಪ್ರೆಸ್ ರೈಲು ಸ್ಥಗಿತಗೊಂಡು ಐದು ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ರೈಲು ಸೇವೆಯನ್ನು ಪುನರಾರಂಭಿಸುವಂತೆ ಒತ್ತಾಯಿಸಿ ಆನ್‌ಲೈನ್ ಸಹಿ ಸಂಗ್ರಹ ಅಭಿಯಾನವನ್ನು ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ ಆರಂಭಿಸಿದೆ. ಕರಾವಳಿಯ ರೈಲು ಬಳಕೆದಾರರು ಕೈಜೋಡಿಸಿದ್ದು, ರೈಲು ಮಾರ್ಗವನ್ನು ಬದಲಾಯಿಸಿ ಪುನರಾರಂಭಿಸುವಂತೆ ಆಗ್ರಹಿಸಿದ್ದಾರೆ.
ದೇಶದ ಅತಿ ದೀರ್ಘ ಪ್ರಯಾಣದ ರೈಲುಗಳ ಪೈಕಿ 4ನೇ ಸ್ಥಾನ ಪಡೆದಿದ್ದ ನವಯುಗ ಎಕ್ಸ್‌ಪ್ರೆಸ್ ರೈಲು ಮಂಗಳೂರಿನಿಂದ ಜಮ್ಮು ಕತ್ರಾಕ್ಕೆ ತನ್ನ ಸೇವೆ ನಿಲ್ಲಿಸಿ ಆಗಲೇ 5 ವರ್ಷ ಕಳೆದಿದೆ. ಬಹು ಬೇಡಿಕೆಯ ಈ ರೈಲು ಸಂಚಾರ ಮತ್ತೆ ಆರಂಭಿಸಬೇಕೆಂದು ಒತ್ತಾಯಿಸಿ ಆನ್‌ಲೈನ್ ಮೂಲಕ ಹಕ್ಕೊತ್ತಾಯ ಅಭಿಯಾನ ಆರಂಭಿಸಲಾಗಿದೆ.
ಜೂ.6 ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವರ್ಚುವಲ್ ಸಹಿ ಸಂಗ್ರಹ ಅಭಿಯಾನ ಆರಂಭಗೊಂಡಿದ್ದು, ಜುಲೈ 6 ರ ರಾತ್ರಿ 12 ಗಂಟೆಯ ತನಕ ನಡೆದಿದೆ. ಕರ್ನಾಟಕ ಕರಾವಳಿಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ನೇರ ರೈಲು ಸೇವೆ ಪುನರಾರಂಭಿಸುವ ಉದ್ದೇಶದಿಂದ ಅಭಿಯಾನ ಆರಂಭಿಸಲಾಗಿದೆ.
1990ರಲ್ಲಿ ಆರಂಭವಾಗಿದ್ದ ಸೇವೆ:
ಮಂಗಳೂರು ಸೆಂಟ್ರಲ್- ಶ್ರೀಮಾತಾ ವೈಷ್ಣೋದೇವಿ ಕತ್ರ ನವಯುಗ ಎಕ್ಸ್‌ಪ್ರೆಸ್ ರೈಲು 1990 ರಲ್ಲಿ ಮಂಗಳೂರಿನಿಂದ ಜಮ್ಮು ತಾವಿ ತನಕ ಸೇವೆ ನೀಡುತ್ತಿದ್ದು, 2015ರಲ್ಲಿ ಕತ್ರ ತನಕ ವಿಸ್ತರಿಸಲಾಗಿತ್ತು. ಪ್ರತೀ ಸೋಮವಾರ ಸಂಜೆ 5 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹೊಸದಿಲ್ಲಿ, ಹರಿಯಾಣ, ಪಂಜಾಬ್ ಮೂಲಕ ಜಮ್ಮು ಮತ್ತು ಕಾಶ್ಮೀರದ ಕತ್ರಕ್ಕೆ 13 ರಾಜ್ಯಗಳನ್ನು ಬಳಸಿಕೊಂಡು ತಲುಪುತ್ತಿತ್ತು.