ಅಭಿವೃದ್ಧಿಗಾಗಿ ಒಂದೇ ಒಂದು ರುಪಾಯಿ ಅನುದಾನ ಸರ್ಕಾರ ಬಿಡುಗಡೆಗೊಳಿಸಿಲ್ಲ: ಶಾಸಕ ಕಾಮತ್

ಅಭಿವೃದ್ಧಿಗಾಗಿ ಒಂದೇ ಒಂದು ರುಪಾಯಿ ಅನುದಾನ ಸರ್ಕಾರ ಬಿಡುಗಡೆಗೊಳಿಸಿಲ್ಲ: ಶಾಸಕ ಕಾಮತ್


ಮಂಗಳೂರು: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕಳೆದ ಎರಡು ವರ್ಷಗಳಲ್ಲಿ ಕರಾವಳಿಯ ಶಾಸಕರು ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ಯಾವುದೇ ಶಿಲಾನ್ಯಾಸ ನಡೆಸಿಲ್ಲ. ಅಭಿವೃದ್ಧಿಗಾಗಿ ಒಂದೇ ಒಂದು ರುಪಾಯಿ ಅನುದಾನ ಸರ್ಕಾರ ಬಿಡುಗಡೆಗೊಳಿಸಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಥಾಪ್ರಕಾರ ಸಿಗುವ ತಲಾ 2 ಕೋಟಿ ರೂ.ಗಳ ಶಾಸಕರ ನಿಧಿಯ ನ್ನು ಹೊರತುಪಡಿಸಿದರೆ ಹೊಸ ಕಾಮಗಾರಿಗೆ ಯಾವುದೇ ಅನುದಾನಗಳು ಬಿಡುಗಡೆಯಾಗುತ್ತಿಲ್ಲ. ಇದು ಕರಾವಳಿಯ ಕಾಂಗ್ರೆಸ್ ಶಾಸಕರನ್ನೂ ಹೊರತಾಗಿಲ್ಲ. ಕಳೆದ ವರ್ಷದ ಪ್ರಾಕೃತಿಕ ವಿಕೋಪದ ಪರಿಹಾರ ಮೊತ್ತ ಇನ್ನೂ ಪಾವತಿಯಾಗಿಲ್ಲ. ಕರಾವಳಿ, ಮಲೆನಾಡಿಗೆ ಆಗಿನ ಬಿಜೆಪಿ ಸರ್ಕಾರ ತಡೆಗೋಡೆ ಹಾನಿಗೆ ಪರಿಹಾರ ನೀಡಿತ್ತು. ಕಾಂಗ್ರೆಸ್ ಸರ್ಕಾರದ ತಡೆಗೋಡೆ ಹಾನಿಗೆ ಎನ್‌ಡಿಆರ್‌ಎಫ್ ನಿಯಮ ಪ್ರಕಾರ ಪರಿಹಾರ ನೀಡಲು ಸಾಧ್ಯವಿಲ್ಲ ಎನ್ನುತ್ತಿದೆ. ಅಲ್ಲದೆ ಮನೆ ಹಾನಿ, ಮಳೆ ಹಾನಿ ಪರಿಹಾರ  ಮೊತ್ತವನ್ನು ಗಣನೀಯವಾಗಿ ಕಡಿಮೆ ಮಾಡಿ ಸಂತ್ರಸ್ತರಿಗೆ ಅನ್ಯಾಯ ಎಸಗುತ್ತಿದೆ ಎಂದರು.

ಮೂಡಾ ಕೆಲಸಕ್ಕೆ ಬೆಂಗಳೂರಲ್ಲಿ ಅರ್ಜಿ ಸಲ್ಲಿಸಬೇಕು!:

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ದಲ್ಲಿ ಯಾವುದೇ ಕೆಲಸ ಆಗಬೇಕಾದರೆ ಬೆಂಗಳೂರಲ್ಲಿ ಅರ್ಜಿ ಸಲ್ಲಿಸಿ ಇಲ್ಲಿ ಸಭೆಗೆ ಅಜೆಂಡಾ ಆಗಿ ಇರಿಸಬೇಕಾದ  ಪ್ರಮೇಯ ಬಂದಿದೆ. ಈ ಹಿಂದೆ ಇಲ್ಲಿ ಅರ್ಜಿ ಸಲ್ಲಿಸಿ, ಇಲ್ಲಿಂದಲೇ ಅರ್ಜಿ ವಿಲೇವಾರಿ ಮಾಡಬಹುದಿತ್ತು. ತೀರ್ಮಾನಗಳೆಲ್ಲವೂ ಬೆಂಗಳೂರಿನಲ್ಲೇ ಆಗಬೇಕಾದರೆ ಇಲ್ಲಿ  ಮೂಡಾ ಹೆಸರಿಗೆ ಮಾತ್ರವೇ ಇರುವುದಾ ಎಂದು ಶಾಸಕ ವೇದವ್ಯಾಸ್ ಕಾಮತ್ ಪ್ರಶ್ನಿಸಿದರು. 

ಬಡವರಿಗೆ ಮನೆ ಮಂಜೂರುಗೊಳಿಸುವ ಕೇಂದ್ರ ಸರ್ಕಾರದ 2.0 ಆವಾಸ್ ಯೋಜನೆಯನ್ನು ರಾಜ್ಯ ಸರ್ಕಾರ ಇನ್ನೂ ಕರ್ನಾಟಕದಲ್ಲಿ ಕಾರ್ಯಗತಗೊಳಿಸಿಲ್ಲ. ರಾಜ್ಯದ  ಪಾಲು ಇಲ್ಲದೆ ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿವೇಶನ ರಹಿತ ಬಡವರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದರು.

ಮಂಗಳೂರು ಜೈಲಿನಲ್ಲಿ ಜಾಮರ್‌ನಿಂದಾಗಿ ಸಾಮಾನ್ಯರಿಗೆ, ಸಂಘಸಂಸ್ಥೆಗಳಿಗೆ ತೊಂದರೆಯಾಗುತ್ತಿದೆ. ಜೈಲಿನ ಒಳಗೆ ಮೊಬೈಲ್‌ನಲ್ಲಿ ಮಾತನಾಡಲು ಸಾಧ್ಯವಿದೆ, ಆದರೆ ಹೊರಗೆ ಜಾಮರ್ ತೊಂದರೆ ನೀಡುತ್ತಿದೆ. ಒಟ್ಟಿನಲ್ಲಿ ಮಂಗಳೂರು ಅವ್ಯವಸ್ಥೆಯ ಗೂಡು ಆಗಿ ಪರಿಣಮಿಸಿದೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article