ಫಲಾನುಭವಿಗಳ ಆಯ್ಕೆ ತ್ವರಿತವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ

ಫಲಾನುಭವಿಗಳ ಆಯ್ಕೆ ತ್ವರಿತವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ


ಮಂಗಳೂರು: ವಿವಿಧ ನಿಗಮಗಳ ಸೌಲಭ್ಯಗಳಿಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಸಂಬಂಧಪಟ್ಟ ಇಲಾಖೆಗಳು ತ್ವರಿತವಾಗಿ ಪೂರ್ಣಗೊಳಿಸಿ ಸೌಲಭ್ಯವನ್ನು ಮಂಜೂರು ಮಾಡಬೇಕೆಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ   ಸೂಚಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಸಮಾಜ ಕಲ್ಯಾಣ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಫಲಾನುಭವಿಗಳ  ದಾಖಲೆ ಪರಿಶೀಲನೆ, ಸ್ಥಳ ಪರಿಶೀಲನೆ, ಮತ್ತಿತರ ಪ್ರಕ್ರಿಯೆಗಳನ್ನು ವಿಳಂಬವಾಗಿ ನಡೆಸುವುದು ಸರಿಯಲ್ಲ. ಇದರಿಂದ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯಗಳು ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಅಗತ್ಯವಿದ್ದರೆ ಮಾತ್ರ ಫಲಾನುಭವಿಗಳ ವಾಸಸ್ಥಳ ಪರಿಶೀಲನೆ ನಡೆಸಿ ತ್ವರಿತಗತಿಯಲ್ಲಿ ಸೌಲಭ್ಯಗಳನ್ನು ಮಂಜೂರು ಮಾಡಬೇಕು ಎಂದು ಅವರು ತಿಳಿಸಿದರು.

ಫಲಾನುಭವಿಗಳ ಆಯ್ಕೆಯನ್ನು ಎಲ್ಲರಿಗೂ ಸಮಾನವಾಗಿ ದೊರಕಿಸಲು ತಾಲೂಕುವಾರು ಆಯ್ಕೆ ಪ್ರಕ್ರಿಯೆ ನಡೆಸುವ ಬಗ್ಗೆ  ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ಬ್ಯಾಂಕ್ ಆಧಾರಿತ  ಸಾಲ ಸೌಲಭ್ಯಗಳಲ್ಲಿ ಫಲಾನುಭವಿಗಳಿಗೆ ಸೌಲಭ್ಯ ಮಂಜೂರು ಮಾಡುವಾಗ ಬ್ಯಾಂಕುಗಳು ಸಿಬಿಲ್ ಕಡಿಮೆ ನೆಪದಲ್ಲಿ ಅರ್ಜಿಗಳನ್ನು ತಿರಸ್ಕರಿಸುವುದರ ಬಗ್ಗೆ  ಬ್ಯಾಂಕರ್ಸ್‌ಗಳೊಂದಿಗೆ ಚರ್ಚಿಸಲಾಗುವುದು ಎಂದು  ತಿಳಿಸಿದರು.

ಯಾವುದೇ ಪೌರ ಕಾರ್ಮಿಕರು ಅಪಘಾತಕ್ಕೀಡಾದರೆ ಅಥವಾ ಮರಣ ಹೊಂದಿದರೆ ಆ ಬಗ್ಗೆ 24 ಗಂಟೆಯೊಳಗೆ ಜಿಲ್ಲಾಧಿಕಾರಿ ಕಚೇರಿಗೆ ವರದಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು. ನಗರ ಪೌರಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ಗ್ರಾಮ ಪಂಚಾಯತ್ ಪೌರಕಾರ್ಮಿಕರಿಗೂ ದೊರಕಿಸಬೇಕು. ಪೌರ ಕಾರ್ಮಿಕರ ಪರಿಹಾರ ಮೊತ್ತವನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಸೂಚಿಸಿದರು. 

ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಮಾತನಾಡಿ, ಎಲ್ಲಾ ಇಲಾಖೆಗಳು ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಗಳಿಗೆ ತ್ವರಿತವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಕಾಲಮಿತಿಯಲ್ಲಿ ಅನುದಾನವನ್ನು ವೆಚ್ಚ ಮಾಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2025 ನೇ ಇಸವಿಯಲ್ಲಿ ಮೇ ಅಂತ್ಯದವರೆಗೆ 24 ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಈ ಪೈಕಿ 16 ಪ್ರಕರಣಗಳಲ್ಲಿ 22.10 ಲಕ್ಷ ರೂ. ಪರಿಹಾರವನ್ನು ನೀಡಲಾಗಿದೆ ಎಂದು ಸಭೆಯಲ್ಲಿ  ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಹೇಮಲತಾ ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ, ಉಪ ಪೊಲೀಸ್ ಆಯುಕ್ತ  ಸಿದ್ದಾರ್ಥ್ ಗೋಯಲ್, ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗಿಸ್ ಮತ್ತಿತರರು ಉಪಸ್ಥಿತರಿದ್ದರು.

 ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ, ಸಫಾಯಿ ಕರ್ಮಚಾರಿಗಳ ನಿಷೇಧ ಮತ್ತು ಪುನರ್ವಸತಿ ಜಿಲ್ಲಾ ಮಟ್ಟದ ಸಮಿತಿ ಸಭೆ, ಅಲೆಮಾರಿ ಅಭಿವೃದ್ಧಿ ನಿಗಮ ಸಮಿತಿ ಸಭೆ ಹಾಗೂ ಎಸ್.ಸಿ.ಪಿ/ಟಿ.ಎಸ್.ಪಿ   ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article