
ಜೂ.22 ರಂದು ಸನಾತನ ಯಕ್ಷಾಲಯ ವಾರ್ಷಿಕೋತ್ಸವ
ಮಂಗಳೂರು: ಸನಾತನ ಯಕ್ಷಾಲಯ ಸಂಸ್ಥೆಯ 16ನೇ ವಾರ್ಷಿಕೋತ್ಸವ ಸಮಾರಂಭ ಜೂ.22ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಮುಖರಾದ ಜಯಪ್ರಕಾಶ್ ಹೆಬ್ಬಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜೂ.22ರ ಅಪರಾಹ್ನ 2.30ರಿಂದ 3.30ರವರೆಗೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮುಖವರ್ಣಿಕೆ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ 4ರಿಂದ 5.30ರವರೆಗೆ ಕವಿ ಮುದ್ದಣ ವಿರಚಿತ ‘ರತ್ನಾವತಿ ಕಲ್ಯಾಣ’ ಹಾಗೂ ಸಂಜೆ 7ರಿಂದ 9ರವರೆಗೆ ‘ಕುಮಾರ ವಿಜಯ’ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಸಂಜೆ 5.30ರಿಂದ 7.30ರವರೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ರಾಕೇಶ್ ರೈ ಅಡ್ಕ ಅವರು ಕಳೆದ 16 ವರ್ಷಗಳ ಹಿಂದೆ ಅತ್ತಾವರ ಪಾರ್ವತಿ ಕುಟೀರದಲ್ಲಿ ಸನಾತನ ಯಕ್ಷಾಲಯ ಎಂಬ ಹೆಸರಿನ ಸಂಸ್ಥೆ ಆರಂಭಿಸಿ ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯಾಭ್ಯಾಸವನ್ನು ಪ್ರಾರಂಭಿಸಿದರು. ಸಂಸ್ಥೆಯಲ್ಲಿ 6 ವರ್ಷದ ಮಗುವಿನಿಂದ ಆರಂಭಿಸಿ 65 ವರ್ಷದ ಹಿರಿಯರವರೆಗೂ ಯಕ್ಷ ಶಿಕ್ಷಣ ನೀಡಲಾಗುತ್ತಿದೆ. ನೂರಾರು ವಿದ್ಯಾರ್ಥಿಗಳು ಯಕ್ಷಶಿಕ್ಷಣ ಪಡೆದಿದ್ದಾರೆ. ನಾಟ್ಯ, ಬಣ್ಣಗಾರಿಕೆ ಹಾಗೂ ಪ್ರಸಾದನ ತರಬೇತಿ ಪಡೆಯುತ್ತಿದ್ದಾರೆ. ಹಲವು ಮಂದಿ ಇಲ್ಲಿ ತರಬೇತಿ ಪಡೆದು ಪರಿಪೂರ್ಣ ಕಲಾವಿದರಾಗಿ ಹೊರಹೊಮ್ಮಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಲೀಲಾಧರ ಶೆಟ್ಟಿ ಕಟ್ಲ, ರಾಕೇಶ್ ರೈ ಅಡ್ಕ, ನಾರಾಯಣ ಶೆಟ್ಟಿ, ಸ್ನೇಹ ಆಚಾರ್ಯ ಉಡುಪಿ, ಸುಕನ್ಯಾ ಶೇಖರ್ ಮುಂತಾದವರು ಉಪಸ್ಥಿತರಿದ್ದರು.