
ಮೋದಿ ಸರಕಾರದ ಸಾಧನೆಯನ್ನು ಮನೆ ಮನೆ ತಲುಪಿಸಿ: ಸತೀಶ್ ಕುಂಪಲ
ಸುಳ್ಯ: ಕಳೆದ 11 ವರ್ಷದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದೆ.ಹಲವಾರು ಜನಪರ ಯೋಜನೆಗಳ ಮೂಲಕ ಸರಕಾರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಮನೆ ಮನೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಸುಳ್ಯ ತಾಲೂಕಿನ ಪೆರುವಾಜೆಯ ಜೆಡಿ ಆಡಿಟೋರಿಯಂನಲ್ಲಿ ನಡೆದ ಬಿಜೆಪಿ ಸುಳ್ಯ ಮಂಡಲ ಕಾರ್ಯಕಾರಿಣಿ ಮತ್ತು ವಿಕಸಿತ ಭಾರತ ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಪೂರ್ಣ ವಿಫಲವಾಗಿದೆ. ಅಕ್ರಮ ಸಕ್ರಮ, 94ಸಿ, 94ಸಿಸಿ ಮಂಜೂರು ಮಾಡುವುದು ಸೇರಿದಂತೆ ಜನರ ಯಾವುದೇ ಕೆಲಸಗಳು ಆಗುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ ಎಂದು ಅವರು ದೂರಿದರು.
ಮೋದಿ ಸರಕಾರದ 11ನೇ ವರ್ಷದ ಆಚರಣೆಯ ಭಾಗವಾಗಿ ಬಿಜೆಪಿ ಹಮ್ಮಿಕೊಂಡ ಸಂಕಲ್ಪದಿಂದ ಸಾಧನೆಯವರೆಗೆ ಕಾರ್ಯಕ್ರಮದ ಜಿಲ್ಲಾ ತಂಡದ ಸಂಚಾಲಕ ಹರೀಶ್ ಕಂಜಿಪಿಲಿ ಮಾತನಾಡಿ ’ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಅಭಿವೃದ್ಧಿಗೆ ಮುನ್ನುಡಿ ಬರೆದರೆ, ನರೇಂದ್ರ ಮೋದಿಯವರು ದೇಶವನ್ನು ಅಭಿವೃದ್ಧಿಯ ಮುಂಚೂಣಿಗೆ ತಂದರು ಎಂದು ಹೇಳಿದರು. ಸುಮಾರು ಒಂದು ಸಾವಿರಕ್ಕೂ ಅಧಿಕ ಯೋಜನೆಗಳನ್ನು ಜನ ಸಾಮಾನ್ಯರಿಗಾಗಿ ಮೋದಿ ಸರಕಾರ ಮಾಡಿದೆ, ದೇಶದ ಸಮಗ್ರ ಅಭಿವೃದ್ಧಿಯೆಡೆಗೆ ಗಮನ ನೀಡಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು.
ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ಮಂಡಲ ಉಸ್ತುವಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರ್, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸಂಕಲ್ಪದಿಂದ ಸಾಧನವರೆಗೆ ಕಾರ್ಯಕ್ರಮದ ಸುಳ್ಯ ತಾಲೂಕು ಸಂಚಾಲಕಿ ಪುಲಸ್ಯ ರೈ, ಸದಸ್ಯರಾದ ಆಶಾ ತಿಮ್ಮಪ್ಪ, ಪದ್ಮನಾಭ ಶೆಟ್ಟಿ ಪೆರುವಾಜೆ ಮತ್ತಿತರರು ಉಪಸ್ಥಿತರಿದ್ದರು. ಸಂಕಲ್ಪದಿಂದ ಸಾಧನೆಯವರೆಗೆ ಕಾರ್ಯಕ್ರಮದ ಜಿಲ್ಲಾ ತಂಡದ ಸದಸ್ಯ ನಿತೀಶ್ ಶಾಂತಿವನ ವಿಕಸಿತ ಭಾರತ ಸಂಕಲ್ಪದ ಪ್ರತಿಜ್ಞೆ ಬೋಧಿಸಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ, ಸುಳ್ಯಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ, ವಿವಿಧ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.