
ಸ್ವಯಂ ತನಿಖೆ ಅಪರಾಧ: ಕ್ರಮದ ಎಚ್ಚರಿಕೆ
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವರೇ ವಿಚಾರಣೆ ಮಾಡಿಕೊಂಡು ಯಾವ ಪ್ರಕರಣದಲ್ಲಿ ಯಾರನ್ನು ಅಪರಾಧಿ ಮಾಡಬೇಕು? ಯಾರನ್ನು ಬಿಡಬೇಕು ಎಂದು ಅವರೇ ತೀರ್ಮಾನಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೊಸ್ಟ್ ಹಾಕುತ್ತಾರೆ. ತನಿಖೆಯನ್ನು ಪೊಲೀಸರು ಸಾಕ್ಷಿಗಳ ಆಧಾರದ ಮೇಲೆ ಮಾಡುತ್ತಾರೆ. ಈ ರೀತಿ ಸ್ವಯಂ ತನಿಖೆಗೆ ಮುಂದಾಗುವುದೂ ಅಪರಾಧವೇ. ಹಾಗಾಗಿ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಯಾರ ವಿರುದ್ಧವಾದರೂ ಸಾಕ್ಷಿಗಳು ಸಿಗದಿದ್ದರೆ ಅಂತಹವರನ್ನು ಬಂಧಿಸಲು ಆಗುವುದಿಲ್ಲ. ಆದ್ದರಿಂದ ಯಾರ ಬಳಿ ಸಾಕ್ಷ್ಯಗಳಿದ್ದರೆ ಅವುಗಳನ್ನು ಪೊಲೀಸರಿಗೆ ನೀಡಬಹುದು. ಅದು ಬಿಟ್ಟು ನಾಗರಿಕರೇ ಸ್ವಯಂ ವಿಚಾರಣೆ ಮಾಡಲು ಹೋದರೆ ಅಂತಹವ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ. ಆದ್ದರಿದ ಇಂತಹ ಕೆಲಸ ಮಾಡದೆ ಜವಾಬ್ದಾರಿಯುವ ಪ್ರಜೆಗಳಾಗಿ ಕಾರ್ಯನಿರ್ವಹಿಸುವುದು ಉತ್ತಮ. ಯಾವುದೇ ಕಾರಣಕ್ಕೂ ಜಾಲತಾಣಗಳಲ್ಲಿ ತಪ್ಪು ಮಾಹಿತಿಯನ್ನು ಬಿತ್ತರಿಸಿ ಪ್ರಕರಣಗಳ ವಿಚಾರಣೆಯ ದಿಕ್ಕು ತಪ್ಪಿಸಬಾರದು ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.