
ರಥಬೀದಿ ಪದವಿ ಕಾಲೇಜಿನಲ್ಲಿ ಉದ್ಯೋಗ ಮೇಳ
ಮಂಗಳೂರು: ಇಲ್ಲಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂ.4 ರಂದು ಐಕ್ಯೂಎಸಿ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದ ವತಿಯಿಂದ ಅಂತಿಮ ವರ್ಷದ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ನಡೆಯಿತು.
ಕಾರ್ಯಕ್ರಮವನ್ನು ಎನ್‌ಐಐಟಿ-ಐಎಫ್‌ಬಿಐ ಮಂಗಳೂರು ಕೇಂದ್ರ ಇದರ ಮುಖ್ಯಸ್ಥೆ ಪವಿತ್ರ ವಿಕಾಶ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಪ್ರೊ. ಡಾ. ಜಯಕರ ಭಂಡಾರಿ ಎಂ. ಅವರು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನೇಮಕಾತಿಯ ಪ್ರಾಮುಖ್ಯತೆ ಮತ್ತು ಲಭ್ಯ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಿ, ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸುವಂತೆ ಪ್ರೋತ್ಸಾಹಿಸಿದರು.
ಐಕ್ಯೂಎಸಿ ಸಂಯೋಜಕ ದೇವಿ ಪ್ರಸಾದ್ ನೇಮಕಾತಿ ಪ್ರಕ್ರಿಯೆಯ ಹಂತಗಳನ್ನು ವಿವರಿಸಿದರು.
ಐಕ್ಯೂಎಸಿ ಸಹಸಂಯೋಜಕಿ ಡಾ. ಜ್ಯೋತಿಪ್ರಿಯಾ ಹಾಗೂ ವಿವಿಧ ನೇಮಕಾತಿ ಸಂಸ್ಥೆಗಳ ಮಾನವ ಸಂಪನ್ಮೂಲ ವಿಭಾಗದ ಪ್ರತಿನಿಧಿಗಳು, ಕಾಲೇಜಿನ ಉದ್ಯೋಗ ಕೋಶದ ಸದಸ್ಯರು ಉಪಸ್ಥಿತರಿದ್ದರು.
ಕಂಪ್ಯೂಟರ್ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ರಘುಪತಿ ವಂದಿಸಿದರು. ಉದ್ಯೋಗ ಕೋಶದ ಸಂಚಾಲಕಿ ಡಾ. ಮಾಲತಿ ಕೆ. ಕಾರ್ಯಕ್ರಮ ನಿರ್ವಹಿಸಿದರು.
ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಲೋಕೇಶ್‌ನಾಥ್ ಬಿ., ನಿರ್ವಹಣಾ ವಿಭಾಗದ ಬೋಧಕರು ಹಾಗೂ ಪ್ರಥಮ ಎಂ.ಕಾಂ. ವಿದ್ಯಾರ್ಥಿಗಳು ಸಹಕರಿಸಿದರು.
ಉದ್ಯೋಗ ಮೇಳದಲ್ಲಿ ಟ್ಯಾಲೆಂಟ್ ಕನೆಕ್ಟ್, ಆಕ್ಸಿಸ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಅಲ್ಮಸನ್ಸ್ ಕಂಪೆನಿಗಳ ಪ್ರತಿನಿಧಿಗಳು ವಿವಿಧ ಹುದ್ದೆಗಳಿಗಾಗಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಸಂದರ್ಶನ ನಡೆಸಿದರು.
ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಗಳ ಒಟ್ಟು 125 ವಿದ್ಯಾರ್ಥಿಗಳು ಸಂದರ್ಶನ ಎದುರಿಸಿದರು. 35 ವಿದ್ಯಾರ್ಥಿಗಳು ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿ ಉದ್ಯೋಗಾರ್ಹತೆ ಪಡೆದರು. ಇತರ 25 ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿ ಯಶಸ್ವಿಯಾಗಿ ಆಯ್ಕೆಯಾಗಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡರು.