
ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
Friday, June 6, 2025
ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ಜೂ.5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸರ್ ಅವರು ದೀಪವನ್ನು ಬೆಳಗಿಸಿ ಪ್ಲಾಸ್ಟಿಕ್ ಬಳಕೆ ನಿಷೇಧ ಎಂಬ ವಿಶೇಷ ಪರಿಕಲ್ಪನೆಯೊಂದಿಗೆ ವಿಶಿಷ್ಟ ಪರದೆಯನ್ನು ಸರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಮಕ್ಕಳೇ ಪ್ರಕೃತಿ, ಪ್ರಕೃತಿಯೇ ಮಕ್ಕಳು. ಪ್ರತಿಯೊಂದು ಮಗುವಲ್ಲಿದೇವರು ನೆಲೆಸಿರುತ್ತಾನೆ, ಪ್ರಕೃತಿಅಂದರೆ ಶಿವ, ಶಿವ ಅಂದರೆ ಪ್ರಕೃತಿ, ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಪ್ರತಿಯೊಂದು ಆಚರಣೆಯಲ್ಲಿಯೂ ಆರಾಧನೆಯಲ್ಲಿಯೂ ಪ್ರಕೃತಿಯ ಜೊತೆಗೆ ನಂಟು ಅಪಾರವಾಗಿತ್ತು. ನಮ್ಮ ದೇಹಕ್ಕೆ ಬರುವ ನೂರೆಂಟು ಖಾಯಿಲೆಗಳಿಗೂ ಸಾವಿರಕ್ಕೂ ಅಧಿಕ ಔಷಧಿಗಳು ಪ್ರಕೃತಿಯಿಂದ ದೊರೆಯುತ್ತದೆ. ಹಾಗಾಗಿ ಪ್ರಕೃತಿಯನ್ನು ರಕ್ಷಿಸೋಣ. ಇಂದ್ರನ ಪೂಜೆಗಿಂತಲು ಪ್ರಕೃತಿಯ ಪೂಜೆ ಶ್ರೇಷ್ಠ ಎಂಬ ಶ್ರೀಕೃಷ್ಣನ ನಿಲುವಿನಂತೆ ಪ್ರಕೃತಿಯನ್ನು ಆರಾಧಿಸೋಣ, ಆ ಮೂಲಕ ಭವ್ಯ ಭವಿಷ್ಯವನ್ನು ರೂಪಿಸೋಣ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರು, ಮಕ್ಕಳೆಲ್ಲರೂ ಸಾಮೂಹಿಕವಾಗಿ ಪರಿಸರ ರಕ್ಷಿಸುವ ಪ್ರತಿಜ್ಞೆಯನ್ನು ಕೈಗೊಂಡರು.
ನಂತರ ಮಕ್ಕಳಿಗೆ ಆತ್ಮಸ್ಥೈರ್ಯವನ್ನು ವೃದ್ಧಿಸಿಕೊಳ್ಳಲು ಬೇಕಾದ ವಿದ್ಯೆಯೊಂದಿಗೆ ಭಾರತೀಯ ಸಂಸ್ಕಾರವನ್ನು ಕೊಡುತ್ತಿರುವ ಈ ಶಕ್ತಿ ವಿದ್ಯಾಸಂಸ್ಥೆಯನ್ನು ಅಭಿನಂದಿಸುತ್ತೇನೆ. ನಾವು ಪ್ರಕೃತಿಯನ್ನು ಪೂಜಿಸಬೇಕು, ಪ್ರಕೃತಿ ಇದ್ದರೆ ಮಾತ್ರ ನಮ್ಮ ಬದುಕು. ಇಂದು ಪ್ರಕೃತಿಯನ್ನು ರಕ್ಷಿಸಲು ಸಂಕಲ್ಪ ಮಾಡುವ ದಿನ. ಒಂದು ಮರ ಬಹಳಷ್ಟು ವರ್ಷಗಳ ಕಾಲ ಪ್ರಾಣಿ ಪಕ್ಷಿ, ದುಂಬಿ, ಚಿಟ್ಟೆ, ಹಲವು ಜೀವಿಗಳಿಗೆ ಆಶ್ರಯವನ್ನುಕೊಡುತ್ತೆ. ಅಂತಹ ಮರದ ಹಾಗೆ ನಾವು ಕೂಡಜೀವನದಲ್ಲಿ ಮತ್ತೊಬ್ಬರಿಗೆ ಆಧಾರವಾಗಬೇಕು. ನಮ್ಮನ್ನುಕೂಡ ಭವಿಷ್ಯದಲ್ಲಿ ಬಹಳಷ್ಟು ಕಾಲ ಸ್ಮರಿಸಿಕೊಳ್ಳುವಂತೆ ಬದುಕಬೇಕು ಎಂಬುದನ್ನು ಮರದಿಂದ ನಾವು ಕಲಿಯುತ್ತೇವೆ. ಮಕ್ಕಳೇ ಇಂದಿನ ದಿನದಲ್ಲಿ ನಾವು ಪ್ಲಾಸ್ಟಿಕ್ ಬಗ್ಗೆ ಎಚ್ಚರಿಕೆ ವಹಿಸಬೇಕು. ಪ್ಲಾಸ್ಟಿಕ್ ಎಂಬ ರಾಕ್ಷಸನಿಗೆ ನಾವು ದಾಸರಾಗಿದ್ದೇವೆ. ಸಾಧ್ಯವಾದಷ್ಟು ಬಟ್ಟೆಗಳಿಂದ ತಯಾರಾದ ಚೀಲಗಳನ್ನು ಬಳಸಿಕೊಂಡು ಕ್ರಮೇಣ ಪ್ಲಾಸ್ಟಿಕ್ ಬಳಕೆಯನ್ನು ಹಂತಹಂತವಾಗಿ ಕಡಿಮೆ ಮಾಡಬಹದು. ನಮ್ಮ ಸುತ್ತಮುತ್ತ ಸಾಕಷ್ಟು ನಾಗ ಬನಗಳಿದ್ದವು. ಇಂದು ಅವೆಲ್ಲ ನಾಶವಾಗಿ ಕಾಂಕ್ರಿಟ್ ಕಟ್ಟಡಗಳು ಎದ್ದು ನಿಂತಿವೆ. ಹಲವು ಕಾಯಿಲೆಗಳಿಗೆ ರಾಮಬಾಣವಾಗುವ ಸಾಕಷ್ಟು ಔಷಧಿಯ ಗಿಡ, ಮರ, ಬಳ್ಳಿ, ಜೀವ ಸಂಕುಲಗಳು ನಮ್ಮ ಪ್ರಕೃತಿಯಲ್ಲಿವೆ. ಉಳ್ಳಾಳದ ಮಾಧವ, ಸಾಲು ಮರದ ತಿಮ್ಮಕ್ಕರಂತಹ ಪ್ರಕೃತಿ ಪ್ರೇಮಿಗಳನ್ನು ಆದರ್ಶವಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ಮಕ್ಕಳು ಪ್ರಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದರು.
ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ ಕೆ.ಸಿ. ನಾಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿಯನ್ನು ಮೂಡಿಸುವ ಪರಿಸರಗೀತೆ, ಒಳಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಸ್ವಾಗತಿಸಿ, ಶಕ್ತಿ ವಸತಿ ಶಾಲೆಯ ಶಿಕ್ಷಕಿ ಶ್ವೇತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.