
ಮರಳು ಅಥವಾ ಕೆಂಪುಕಲ್ಲಿನ ಸಮಸ್ಯೆಯನ್ನು ನ್ಯಾಯಯುತವಾದ ಮಾರ್ಗದಲ್ಲಿ ಪರಿಹರಿಸಲಾಗುವುದು: ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ‘ಕೆಂಪು ಕಲ್ಲು ಹಾಗೂ ಮರಳಿನ ಅಕ್ರಮ ಗಣಿಗಾರಿಕೆಯ ಅವ್ಯವಹಾರಗಳು ಜಿಲ್ಲೆಯಲ್ಲಿ ನಡೆಯುವ ಕೋಮುಗಲಭೆ, ಹಲ್ಲೆ ಪ್ರಕರಣಗಳಲ್ಲಿ ಸಂಬಂಧ ಇರುವುದು ಹಲವು ಸಂದರ್ಭಗಳಲ್ಲಿ ಕಂಡು ಬಂದಿರುತ್ತದೆ. ಹಾಗಾಗಿ ಈ ಅಕ್ರಮಗಳಿಗೆ ಕಟ್ಟುನಿಟ್ಟಿನ ಕ್ರಮ ವಹಿಸಿರುವುದರಿಂದ ಜಿಲ್ಲೆಯಲ್ಲಿ ಸದ್ಯ ಎಲ್ಲವೂ ಬಂದ್ ಆಗಿ ನಿಯಂತ್ರಣದಲ್ಲಿದೆ. ಹಾಗಾಗಿ ಜಿಲ್ಲೆಗೆ ಅಗತ್ಯವಾಗಿರುವ ಮರಳು ಅಥವಾ ಕೆಂಪುಕಲ್ಲಿನ ಸಮಸ್ಯೆಯನ್ನು ನ್ಯಾಯಯುತವಾದ ಮಾರ್ಗದಲ್ಲಿ ಪರಿಹರಿಸಲಾಗುವುದು. ಈ ನಡುವೆ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಾಡುವ ನಿಟ್ಟಿನಲ್ಲಿ ಶೀಘ್ರವೇ ಶಾಂತಿ ಸಭೆಯನ್ನೂ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ದ.ಕ. ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂದರ್ಭ ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು ಜಿಲ್ಲೆಯಲ್ಲಿ ಮನೆ ನಿರ್ಮಾಣ ಸೇರಿದಂತೆ ಬಡ ಕೂಲಿ ಕಾರ್ಮಿಕರಿಗೆ ಸಮಸ್ಯೆಯಾಗಿರುವ ಕಾರಣ ಸಕ್ರಮ ಮರಳು ಹಾಗೂ ಕೆಂಪು ಕಲ್ಲು ತೆಗೆಯಲು ಅವಕಾಶ ನೀಡಲು ಒತ್ತಾಯಿಸಿದಾಗ ಈ ಪ್ರತಿಕ್ರಿಯೆ ನೀಡಿದರು.
ದ.ಕ. ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಕೆಂಪುಕಲ್ಲು ತೆಗೆಯುವುದು ಮತ್ತು ಮರಳುಗಾರಿಕೆಗೆ ಸಂಬಂಧಿಸಿ ಕಾನೂನು ರೀತಿಯಲ್ಲಿ ಕ್ರಮಕ್ಕೆ ಮುಂದಿನ ವಾರ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಅಗತ್ಯ ಕ್ರಮ ವಹಿಸಲಾಗುವುದು. ಸದ್ಯ ತಾತ್ಕಾಲಿಕವಾಗಿ ವ್ಯವಸ್ಥೆ ಸಾಧ್ಯವಿಲ್ಲ ಎಂದರು.
ಬೆಂಗಳೂರಿನಲ್ಲಿ ಸಭೆಗೆ ಮುನ್ನ ದ.ಕ. ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳಿನ ಅಭಾವದ ಬಗ್ಗೆ ಸಭೆ ನಡೆಸುವಂತೆ ಸಲಹೆ ನೀಡಿದ ಅವರು, ಮರಳು ಮತ್ತು ಕೆಂಪು ಕಲ್ಲು ತೆಗೆಯಲು ಮರು ಟೆಂಡರ್ ಮಾಡುವ ಬ್ಲಾಕ್‌ಗಳ ಪರವಾನಿಗೆಯ ಪಟ್ಟಿಯನ್ನು ಒಳಗೊಂಡು ವರದಿ ಸಲ್ಲಿಸಬೇಕು. ಜಿಲ್ಲಾಡಳಿತದ ವರದಿ ಆಧಾರದ ಮೇಲೆ ಬೆಂಗಳೂರಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಆಯುಕ್ತರೊಂದಿಗೆ ಉನ್ನತ ಮಟ್ಟದ ಸಭೆಯಲ್ಲಿ ಮರಳು ಮತ್ತು ಕೆಂಪು ಕಲ್ಲು ತೆಗೆಯುವ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿ ನಿಯಮಗಳೊಂದಿಗೆ ಕ್ರಮ ವಹಿಸಲಾಗುವುದು. ಮಾತ್ರವಲ್ಲದೆ ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ರಾಜಧನವನ್ನು ವಿಧಿಸಲಾಗಿದೆ ಎಂಬ ಆರೋಪದ ಕುರಿತಂತೆಯೂ ಚರ್ಚಿಸಲಾಗುವುದು. ಜಿಲ್ಲೆಯಲ್ಲಿ ಅಕ್ರಮ ಕೆಂಪುಕಲ್ಲಿನ ಗಣಿಗಾರಿಕೆಗೆ ಸಂಬಂಧಿಸಿ ಲೋಕಾಯುಕ್ತರು ಈಗಾಗಲೇ 18 ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಹಾಗಾಗಿ ಸದ್ಯ ಜಿಲ್ಲೆಯಲ್ಲಿ ಈ ಬಗ್ಗೆ ತಾತ್ಕಾಲಿಕ ಕ್ರಮಗಳನ್ನು ಅನುಸರಿಸಲು ಸಾಧ್ಯವಿಲ್ಲ. ಕಾನೂನು ಚೌಕಟ್ಟಿನಲ್ಲಿಯೇ ಈ ಬಗ್ಗೆ ನಿರ್ಧಾರ ಆಗಬೇಕಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಸಭೆಯಲ್ಲಿ ಶಾಸಕರಾದ ಬೋಜೇಗೌಡ, ಮಂಜುನಾಥ ಭಂಡಾರಿ, ಡಾ. ಧನಂಜಯ ಸರ್ಜಿ, ಕಿಶೋರ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಸಂತೋಷ್ ಕುಮಾರ್, ಸುಜಯ್ ಕೃಷ್ಮ, ಮೆಲ್ವಿನ್ ಡಿಸೋಜಾ, ಪ್ರವೀಣ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿ.ಪಂ. ಸಿಇಒ ಡಾ. ಆನಂದ್, ಪೊಲೀಸ್ ಕಮಿಷನರ್ ಸುಽರ್ ಕುಮಾರ್ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಽಕಾರಿ ಆಂಟನಿ ಮರಿಯಪ್ಪ ಮೊದಲಾದವರು ಉಪಸ್ಥಿತರಿದ್ದರು.