ರಾಜ್ಯದಲ್ಲಿ ಯಾವ ಕ್ರಾಂತಿಯೂ ಆಗುವುದಿಲ್ಲ, ಸರಕಾರ ಸುಭದ್ರವಾಗಿದೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಯಾವ ಕ್ರಾಂತಿಯೂ ಆಗುವುದಿಲ್ಲ, ಸರಕಾರ ಸುಭದ್ರವಾಗಿದೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್


ಮಂಗಳೂರು: ರಾಜ್ಯದಲ್ಲಿ ಯಾವ ಕ್ರಾಂತಿಯೂ ಆಗುವುದಿಲ್ಲ, ಸರಕಾರ ಸುಭದ್ರವಾಗಿದೆ. ಕ್ರಾಂತಿ ಪದವೇ ಸರಿಯಲ್ಲ. ಸಚಿವ ರಾಜಣ್ಣ ಅವರ ಈ ರೀತಿಯ ಹೇಳಿಕೆಗಳು ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಮಾಡುವಂತದ್ದು. ವಿಷಯಗಳಿದ್ದರೆ ಸ್ಪಷ್ಟವಾಗಿ ಹೇಳಬೇಕು. ಅನಾವಶ್ಯಕವಾಗಿ ಈ ರೀತಿಯ ಹೇಳಿಕೆ ನೀಡುವುದು ಸರಕಾರಕ್ಕೂ, ಪಕ್ಷಕ್ಕೂ ಒಳ್ಳೆಯದಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಸಚಿವ ರಾಜಣ್ಣ ಏನು ಹೇಳಿದ್ದಾರೋ, ಯಾವ ಅರ್ಥದಲ್ಲಿ ಹೇಳಿದ್ದಾರೋ ನೀವು ಅವರನ್ನೇ ಕೇಳಬೇಕು. ನನಗಂತೂ ಏನೂ ಅರ್ಥವಾಗುತ್ತಿಲ್ಲ. ಮೂರು ತಿಂಗಳಲ್ಲಿ ಕಾಂಗ್ರೆಸ್ ಸರಕಾರ ಪತನಗೊಂಡು ಬಿಜೆಪಿ ಸರಕಾರ ಬರುತ್ತದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಬಿಜೆಪಿಯವರು ತಿರುಕನ ಕನಸು ಕಾಣುತ್ತಿದ್ದಾರೆ. ಬಿಜೆಪಿಯವರು ಅವರ ಪಕ್ಷವನ್ನು ಮೊದಲು ನೋಡಿಕೊಳ್ಳಲಿ. ಆರ್. ಅಶೋಕ್ ಮೊದಲು ತಮ್ಮ ಸ್ಥಾನ ಉಳಿಸಿಕೊಳ್ಳಲಿ. ಈ ವಿಚಾರದಲ್ಲಿ ಅನಾವಶ್ಯಕವಾಗಿ ಬಿಜೆಪಿ ಸಂಭ್ರಮಾಚರಣೆ ಮಾಡುತ್ತಿದೆ ಎಂದರು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು ಮೂರು ದಿನಗಳ ಕಾಲ ಎಲ್ಲ ಶಾಸಕರನ್ನು, ಪಕ್ಷದ ಮುಖಂಡರನ್ನು ಭೇಟಿಯಾಗಲಿದ್ದಾರೆ. ಎಲ್ಲರ ಅಭಿಪ್ರಾಯ ಸಂಗ್ರಹಣೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಪಕ್ಷದಲ್ಲಿ ಯಾವಾಗಲೂ ಅನೇಕ ವಿಷಯಗಳಿರುತ್ತವೆ. ಬೇರೆ ಬೇರೆ ಅಭಿಪ್ರಾಯಗಳು ಇರುತ್ತವೆ. ಈ ರೀತಿಯ ಸಮಾಲೋಚನೆಗಳಿಂದ ಸಮಸ್ಯೆಗಳನ್ನು ಇತ್ಯರ್ಥ ಮಾಡಲಾಗುತ್ತದೆ. ನಾನೂ ಸುರ್ಜೇವಾಲಾ ಅವರನ್ನು ಭೇಟಿಯಾಗುತ್ತೇನೆ. ಆಂತರಿಕ ವಿಷಯಗಳನ್ನು ನಾವೇ ಬಗೆಹರಿಸುತ್ತೇವೆ ಎಂದರು.

ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿ.ಆರ್. ಪಾಟೀಲ್ ಹೇಳಿಕೆ ನೀಡಿದ್ದಾರೆ. ಬಳಿಕ ಸಿಎಂ ಅವರನ್ನು ಭೇಟಿ ಆಗಿದ್ದಾರೆ. ಆದರೆ, ಸ್ಪಷ್ಟ ಮಾಹಿತಿ ಇರಬೇಕು. ಮನೆ ಹಂಚಿಕೆಯಾಗುವುದು ಗ್ರಾ.ಪಂ ಮಟ್ಟದಲ್ಲಿ. ಅಲ್ಲಿ ಭ್ರಷ್ಟಾಚಾರ ನಡೆದಿದ್ದರೆ ಅವರು ಪೂರ್ತಿ ಮಾಹಿತಿಯೊಂದಿಗೆ ಹೇಳಬೇಕಾಗುತ್ತದೆ. ಮಾಹಿತಿ ನೀಡಿದ್ದರೆ ಖಂಡಿತಾ ಗಮನ ನೀಡುತ್ತೇವೆ. ಭ್ರಷ್ಟಾಚಾರ ಇಲ್ಲ ಎಂದು ಯಾರೂ ಹೇಳಲಾಗದು. ಇಡೀ ದೇಶದಲ್ಲಿ ಭ್ರಷ್ಟಾಚಾರ ಇದೆ. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು. ಅದರ ವಿರುದ್ಧ ಕ್ರಮ ಆಗಬೇಕು ಎಂದು ಸಚಿವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಹಾಗೂ ಮರಳು ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಜಿಲ್ಲೆಯಲ್ಲಿ ಕಾನೂನು ಪ್ರಕಾರ ಏನು ನಡೆಯಬೇಕೋ ಅದಕ್ಕೆ ಅನುಮತಿ ನೀಡುತ್ತೇವೆ. ರಾತ್ರೋರಾತ್ರಿ ಏನೂ ಮಾಡಲಾಗದು. ಹಿರಿಯ ಅಽಕಾರಗಳ ಜತೆ ಚರ್ಚಿಸಿ ನಿರ್ಧರಿಸಲಾಗುವುದು. ಕಾನೂನು ಉಲ್ಲಂಘಿಸಿ ಕೆಂಪು ಕಲ್ಲು ಹಾಗೂ ಮರಳು ಗಣಿಗಾಣಿಕೆ ಮಾಡಲು ಸಾಧ್ಯವಿಲ್ಲ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article