
ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ: ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ.
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಅಥವಾ ಕೆಂಪು ಕಲ್ಲಿನ ಗಣಿಗಾರಿಕೆಗೆ ಸಂಬಂಧಿಸಿ ಪೊಲೀಸ್ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಾನು ಸೇರಿದಂತೆ ಎಲ್ಲರದ್ದೂ ಒಂದೇ ನಿಲುವು. ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಹೇಳಿದರು.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ದ.ಕ. ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಶಾಸಕರುಗಳ ಬೇಡಿಕೆಗೆ ಪ್ರತಿಕ್ರಿಯೆ ನೀಡಿದರು.
ಸಭೆಯಲ್ಲಿ ಕೆಂಪು ಕಲ್ಲು ಹಾಗೂ ಮರಳಿನ ಅಭಾದಿಂದ ತೊಂದರೆ ಆಗಿರುವ ಕುರಿತಂತೆ ಸಭೆಯಲ್ಲಿ ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಉಮಾನಾಥ ಕೋಟ್ಯಾನ್, ಮರಳು ಹಾಗೂ ಕೆಂಪುಕಲ್ಲಿನ ಅಕ್ರಮ ಗಣಿಗಾರಿಕೆಯನ್ನು ನೂತನ ಆಯುಕ್ತರು ಹಾಗೂ ಎಸ್ಪಿಯವರು ಬಂದ ಬಳಿಕ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದು ಉತ್ತಮ ವಿಚಾರ. ಆದರೆ ಅದನ್ನು ಸಕ್ರಮಗೊಳಿಸಬೇಕಾಗಿದೆ. ಮರಳು ಮತ್ತು ಕೆಂಪು ಕಲ್ಲು ಇಲ್ಲದೆ ಮೇಸಿಯಿಂದ ಹಿಡಿದು ಅನೇಕ ಕಾರ್ಮಿಕರಿಗೆ ಕೆಲಸ ಇಲ್ಲದೆ ಊಟಕ್ಕೆ ಗತಿ ಇಲ್ಲವಾಗಿದೆ. ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ತಕ್ಷಣ ಮರಳು ಮತ್ತು ಕೆಂಪು ಕಲ್ಲು ದೊರೆಯುವುದನ್ನು ಸಕ್ರಮಗೊಳಿಸಬೇಕು ಎಂದು ಆಗ್ರಹಿಸಿದಾಗ, ಶಾಸಕರಾದ ಹರೀಶ್ ಪೂಂಜಾ, ರಾಜೇಶ್ ನಾಯ್ಕ್ ಅವರೂ ದನಿಗೂಡಿಸಿದರು.
ರಾಜ್ಯದಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಟನ್‌ಗೆ 282 ರೂ. ರಾಜಧನ ವಿಧಿಸಲಾಗುತ್ತಿದೆ, ಕೇರಳದಲ್ಲಿ 32 ರೂ.ಗಳು ಎಂದು ಉಮಾನಾಥ ಕೋಟ್ಯಾನ್ ಹೇಳಿದರು.
ಈ ಸಂದರ್ಭ ಶಾಸಕರಾದ ಐವನ್ ಡಿಸೋಜಾ ಮಾತನಾಡಿ, ಕೆಂಪು ಕಲ್ಲು ತೆಗೆಯಲು ಪರವಾನಿಗೆ ಕೋರಿದಾಗ ಅಽಕಾರಿಗಳು ಕೃಷಿ ಭೂಮಿಯಲ್ಲಿ ಕೆಂಪು ಕಲ್ಲು ತೆಗೆದು ಸಮತಟ್ಟು ಮಾಡಿ ಕೃಷಿ ಮಾಡುವ ಉದ್ದೇಶಕ್ಕಾಗಿ ಅನುಮತಿ ಎಂದು 5000 ರೂ. ಶುಲ್ಕ ಪಡೆದು ಪರವಾನಿಗೆಗೆ ಅವಕಾಶ ನೀಡುತ್ತಾರೆ. ಇದು ಕಾನೂನು ಪ್ರಕಾರದ ಅನುಮತಿ ಆಗಿರುವುದಿಲ್ಲ. ಇದು ಕೃಷಿಗಾಗಿ ನೀಡಿರುವ ಅನುಮತಿ ಆಗಿದ್ದು, ಕೆಂಪು ಕಲ್ಲು ಗಣಿಗಾರಿಕೆಗೆ ಅವಕಾಶವಿಲ್ಲ, ಇದು ಅಕ್ರಮ ಎಂದು ಬಂದ್ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಕೆಂಪು ಕಲ್ಲು ಇಲ್ಲದೆ ಮನೆ ಕಟ್ಟಲು ಆಗುವುದಿಲ್ಲ. ಎಂ ಸ್ಯಾಂಡ್ ಕೂಡಾ ನಮ್ಮಲ್ಲಿ ಹೆಚ್ಚಾಗಿ ಬಳಕೆಯಾಗುವುದಿಲ್ಲ. ಮರಳು ಮತ್ತು ಕೆಂಪುಕಲ್ಲು ಜನರಿಗೆ ಸಿಗುವ ರೀತಿಯಲ್ಲಿ ಕಾನೂನಾತ್ಮಕಗೊಳಿಸಬೇಕು ಎಂದು ಆಗ್ರಹಿಸಿದರು.
ಶಾಸಕರಾದ ಹರೀಶ್ ಪೂಂಜಾ ಮಾತನಾಡಿ, ಮರಳು ಮತ್ತು ಕಲ್ಲಿನ ಸಮಸ್ಯೆಯಿಂದ ತುಂಬಾ ಜನರಿಗೆ ಕೆಲಸ ಇಲ್ಲವಾಗಿದೆ. ಗ್ರಾಮ ಪಂಚಯಾತ್‌ನ ರಸ್ತೆಗಳಿಗೆ ಕಚ್ಚಾ ರಸ್ತೆಗಳಿಗೆ ಚರಳನ್ನು ಹಾಕಲಾಗುತ್ತದೆ. ಇದು ಕೂಡಾ ಇಲ್ಲದೆ ಗ್ರಾಮೀಣ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದಾಗ, ಶಾಸಕ ರಾಜೇಶ್ ನಾಯ್ಕ್ ಅವರೂ ಕಾನೂನು ರೀತಿಯಲ್ಲಿ ಮರಳು ಹಾಗೂ ಕೆಂಪುಕಲ್ಲು ಲಭ್ಯವಾಗುವಂತೆ ತಕ್ಷಣ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ವ್ಯಾವಹಾರಿಕ ದೃಷ್ಟಿಯಿಂದ ಕೆಂಪು ಕಲ್ಲು ತೆಗೆಯುವುದು ಗಣಿಗಾರಿಕೆ ಎಂದೇ ಪರಿಗಣಿಸಲಾಗುತ್ತದೆ. ಸದ್ಯ ಲೋಕಾಯುಕ್ತ ವರದಿ ಆಧಾರದಲ್ಲಿ ನಾವು ಕ್ರಮ ವಹಿಸಬೇಕಾಗಿದೆ ಎಂದು ಸಚಿವ ದಿನೇಶ್ ಗೂಂಡೂರಾವ್ ಸ್ಪಷ್ಟಪಡಿಸಿದಾಗ, ತನಿಖೆ ಆಗಿ ಬರುವವರೆಗೆ ಕಷ್ಟಕರವಾದ ಪರಿಸ್ಥಿತಿಗೆ ತಾತ್ಕಾಲಿಕವಾಗಿ ನಿಭಾಯಿಸಬೇಕು ಎಂದು ಎಂದು ಉಮಾನಾಥ ಕೋಟ್ಯಾನ್ ಹೇಳಿದರೆ, ಅಭಿವೃದ್ಧಿ ಕಾಮಗಾರಿಗಳಿಗೆ ತಡೆಯಾಗಬಾರದು ಎಂದು ಶಾಸಕ ಪ್ರತಾಪ್ ಸಿಂಹ ನಾಯಕ್ ಆಗ್ರಹಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಸಂದೀಪ್ ಜಿ.ಯು. ಮಾಹಿತಿ ನೀಡಿ, ಜಿಲ್ಲೆಯಲ್ಲಿ 26,000 ಮೆಟ್ರಿಕ್ ಟನ್ ಕೆಂಪು ಕಲ್ಲು ಲಭ್ಯವಿದೆ.
25 ಮರಳು ಬ್ಲಾಕ್‌ಗಳಳಲ್ಲಿ 15 ಕಾರ್ಯನಿರ್ವಹಿಸುತ್ತಿದ್ದು, ಜೂನ್ 5ರಿಂದ ಅಕ್ಟೋಬರ್ 15ರವರೆಗೆ ಪರಿಸರ ಕ್ಲಿಯರೆನ್ಸ್ ಗಣಿಗಾರಿಕೆಗೆ ನಿಷೇಧವಿರುತ್ತದೆ. 25 ಬ್ಲಾಕ್‌ಗಳಲ್ಲಿ 5.55 ಲಕ್ಷ ಟನ್ ಮರಳು ಲಭ್ಯವಿದೆ. ಕಾರ್ಯನಿರ್ವವಹಿಸುತ್ತಿರುವ 15 ಬ್ಲಾಕ್‌ಗಳಲ್ಲಿ 3.44 ಲಕ್ಷ ಟನ್ ಮರಳು ಲಭ್ಯವಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ 1.16 ಲಕ್ಷ ಟನ್ ಎಂ ಸ್ಯಾಂಡ್ ಮಾರಾಟ ಆಗಿದೆ. 2 ತಿಂಗಳಲ್ಲಿ 27 ಸಾವಿರ ಮೆಟ್ರಿಕ್ ಟನ್ ಮಾರಾಟ ಆಗಿದೆ. 74,650 ಮೆಟ್ರಿಕ್ ಟನ್ ಮರಳು ಕಳೆದ ವರ್ಷ ಮಾರಾಟ ಆಗಿದೆ. ಈ ವರ್ಷ 11,000 ಮೆಟ್ರಿಕ್ ಟನ್ ಮಾರಾಟ ಆಗಿದೆ. ಮೂರು ಟನ್ ಲಾರಿಗೆ 10ಸಾವಿರ ರೂ.ನಿಂದ 12,000 ರೂ.ಗೆ ಮರಳು ಪೂರೈಸಲಾಗುತ್ತದೆ ಎಂದು ವಿವರಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ಉಡುಪಿಯಲ್ಲಿ ಸ್ಯಾಂಡ್ ಬಜಾರ್ ಆಪ್ ಮೂಲಕ ನಿರಂತರವಾಗಿ ಮರಳು ದೊರೆಯುತ್ತಿದೆ. ಇಲ್ಲಿಯೂ ಅದೇ ರೀತಿ ಆಪ್ ಮೂಲಕ ಬೇಡಿಕೆ ಸಲ್ಲಿಸಲು ಅವಕಾಶ ನೀಡಿದರೆ, ಮರಳು ಬೇಕಾದವರಿಗೆ ಪೂರೈಕೆ ಮಾಡಬಹುದು. ಹೆಚ್ಚಿನ ಹಣ ಪಡೆದಾಗ ದೂರು ನೀಡಿದರೆ ಕ್ರಮ ವಹಿಸಬಹುದು ಎಂದು ಹೇಳಿದರು.
ಸಭೆಯಲ್ಲಿ ಶಾಸಕರಾದ ಬೋಜೇಗೌಡ, ಮಂಜುನಾಥ ಭಂಡಾರಿ, ಡಾ. ಧನಂಜಯ ಸರ್ಜಿ, ಕಿಶೋರ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಸಂತೋಷ್ ಕುಮಾರ್, ಸುಜಯ್ ಕೃಷ್ಮ, ಮೆಲ್ವಿನ್ ಡಿಸೋಜಾ, ಪ್ರವೀಣ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿ.ಪಂ. ಸಿಇಒ ಡಾ. ಆನಂದ್, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಮರಿಯಪ್ಪ ಮೊದಲಾದವರು ಉಪಸ್ಥಿತರಿದ್ದರು.