
ಹಬ್ಬ ಸಂದರ್ಭಗಳಲ್ಲಿ ಪ್ರಾಣಿ ಹತ್ಯೆ ನಿಷೇಧ ಪಾಲಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು: ಸುನೀಲ್ ಕೆ.ಆರ್.
Wednesday, June 4, 2025
ಮಂಗಳೂರು: ರಾಜ್ಯ ಮತ್ತು ದೇಶದ ಕಾನೂನು ಹಾಗೂ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸುತ್ತೋಲೆ ಮತ್ತು ಸುಪ್ರೀಂ ಕೋರ್ಟ್ ಆದೇಶದನ್ವಯ ಬಕ್ರೀದ್ ಮತ್ತಿತರ ಹಬ್ಬ ಸಂದರ್ಭಗಳಲ್ಲಿ ಜಾನುವಾರು ಮತ್ತು ಇತರೆ ಪ್ರಾಣಿಗಳ ಹತ್ಯೆ ನಿಷೇಧವಿದ್ದು, ಅದನ್ನು ಕಟ್ಟು ನಿಟ್ಟಾಗಿ ಪಾಲಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ವಿಶ್ವಹಿಂದು ಪರಿಷತ್ ಪ್ರಾಂತ ಗೋರಕ್ಷಾ ಪ್ರಮುಖ್ ಸುನೀಲ್ ಕೆ.ಆರ್. ಹೇಳಿದರು.
ರಾಜ್ಯದಲ್ಲಿ ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ ಜಾರಿಯಲ್ಲಿದ್ದು, ಅದರ ಪ್ರಕಾರ ಕುರ್ಬಾನಿಗೆ (ಯಾವುದೇ ರೀತಿಯ ಹತ್ಯೆ) ನಿಷೇಧವಿದೆ ಹಾಗೂ ಕುರ್ಬಾನಿಗೆ ಜಾನುವಾರು ಸಾಗಾಟವೂ ಶಿಕ್ಷಾರ್ಹ ಅಪರಾಧವಾಗಿದೆ. ಕುರ್ಬಾನಿ ನೀಡಿದ ಸ್ಥಳವನ್ನು ಸರಕಾರ ಮುಟ್ಟುಗೋಲಿಗೆ ಅವಕಾಶವಿದೆ. ರಾಜ್ಯದಲ್ಲಿ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯಿದೆ 1959 ತಿದ್ದುಪಡಿ 1975 ಇದರ ಪ್ರಕಾರವೂ ಜಾನುವಾರು ಬಲಿ (ಕುರ್ಬಾನಿ ) ನಿಷೇಧವಿರುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಮುಂದಿನ ಬಕ್ರೀದ್ ಹಬ್ಬದ ವೇಳೆ ಜಾನುವಾರು ಹತ್ಯೆಗೆ ಅವಕಾಶ ನೀಡಬಾರದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಸುಪ್ರೀಂಕೋರ್ಟ್ ತೀರ್ಪು ಹಾಗೂ ಸರಕಾರ ವಿವಿಧ ಆದೇಶಗಳಂತೆ ರಾಜ್ಯದಲ್ಲಿ ಜಾನುವಾರುಗಳ ಕುರ್ಬಾನಿ ಕಟ್ಟು ನಿಟ್ಟಾಗಿ ತಡೆಯಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ನಾವು ಮನವಿ ಮಾಡುತ್ತಿದ್ದೇವೆ. ಯಾವುದೇ ಜಾನುವಾರು ಅಕ್ರಮ ಸಾಗಾಟವಾಗದಂತೆ ನಾಕಾಬಂದಿ ಹಾಕಬೇಕು. ಕಿವಿಯೋಲೆ ಇಲ್ಲದ ಜಾನುವಾರುಗಳನ್ನು ಸಾರ್ವಜನಿಕ ಜಾಗದಲ್ಲಿ ಶೇಖರಿಸಿ ಇಡದಂತೆ, ಮೇಯಲು ಬಿಡದಂತೆ ಕ್ರಮ ಕೈಗೊಳ್ಳಬೇಕು. ಸೂರ್ಯಾಸ್ತದಿಂದ ಸೂರ್ಯೋದಯವರೆಗೆ ಕಾಲ್ನಡಿಗೆಯಲ್ಲಿ ಜಾನುವಾರು ಸಾಗಾಟ ನಿಷೇಧವಿದ್ದು ಈ ಸಮಯದಲ್ಲಿ ಸಾಗಾಟ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಮಾಧ್ಯಮದ ಮೂಲಕ ಪ್ರಚಾರ ಮಾಡಬೇಕು. ಅದನ್ನು ಉಲ್ಲಂಘಿಸಿ ಕಿವಿಯೋಲೆ ಇಲ್ಲದೆ ಶೇಖರಿಸಿಟ್ಟ ಮೇಯಲು ಬಿಟ್ಟ ಜಾನುವಾರುಗಳನ್ನು ವಶಪಡಿಸಿ, ಜಾನುವಾರು ನಿಷೇಧ ಕಾಯಿದೆ 2020 ರಂತೆ ಪ್ರಕರಣ ದಾಖಲಿಸಬೇಕು. ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆ ಹಿಂದೆ ಕಾರ್ಯಾಚರಿಸಿದ್ದ ಸ್ಥಳದಲ್ಲಿ ನಿಗಾ ಇರಿಸಬೇಕು, ಪ್ರಾರ್ಥನಾ ಮಂದಿರಗಳಲ್ಲಿಯೂ ಜಾನುವಾರು ಶೇಖರಿಸಿ ಇಡದಂತೆ ನಿಗಾ ವಹಿಸಬೇಕು ಎಂದರು.
ಮಂಗಳೂರು ನೂತನ ಪೊಲೀಸ್ ಆಯುಕ್ತರು ಅಧಿಕಾರ ವಹಿಸಿಕೊಂಡ ಬಳಿಕ ಕೇರಳದಿಂದ ಮಂಗಳೂರಿಗೆ ಅಕ್ರಮವಾಗಿ ಕಂಟೈನರ್ ಮೂಲಕ ಸಾಗಾಟ ಮಾಡುತ್ತಿದ್ದ 24 ಜಾನುವಾರುಗಳನ್ನು ತಲಪಾಡಿ ಬಳಿ ರಕ್ಷಣೆ ಮಾಡಲಾಗಿದೆ. ಪೊಲೀಸ್ ಆಯುಕ್ತರ ಈ ಕಾರ್ಯ ಶ್ಲಾಘನೀಯ. ಅಕ್ರಮ ಗೋಸಾಗಾಟ, ಗೋವಂಶ ವಧೆ ಆಗದಂತೆ ಕ್ರಮ ಕೈಗೊಳ್ಳಲು ಎಲ್ಲ ಪೊಲೀಸ್ ಠಾಣೆಯ ಠಾಣಾಽಕಾರಿಗಳಿಗೆ ಮನವಿ ನೀಡಲಾಗಿದೆ ಎಂದು ಅವರು ಹೇಳಿದರು.
ಕಾಯಿದೆಯಂತೆ ಜಾನುವಾರು ಹತ್ಯೆ ತಡೆಯುವ ಅಽಕಾರ ಸಾರ್ವಜನಿಕರಿಗೂ ಇದ್ದು, ಅಕ್ರಮ ಜಾನುವಾರು ಸಾಗಾಟ, ಶೇಖರಣೆ, ಹತ್ಯೆ ತಡೆಯಲು ಸಾರ್ವಜನಿಕರು ಅಽಕಾರ ಉಪಯೋಗಿಸಲು ಅವಕಾಶ ಸಿಗದಂತೆ ಮೊದಲೇ ಪೊಲೀಸರು ಎಚ್ಚರ ವಹಿಸಬೇಕು. ಈ ಎಲ್ಲಾ ಕಾರ್ಯಗಳಲ್ಲಿ ಕಾನೂನುಬದ್ದವಾಗಿ ಪೊಲೀಸ್ ಇಲಾಖೆಗೆ ಸಹಕರಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಸುನೀಲ್ ಕೆ.ಆರ್. ಹೇಳಿದರು.
ಕೊಳತ್ತಮಜಲಿನ ರೆಹಮಾನ್ ಹತ್ಯೆ ವಿಚಾರದಲ್ಲಿ ಬಜರಂಗದಳದ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಬಜರಂಗದಳ ಕಾರ್ಯಕರ್ತ ಹತ್ಯೆ ಮಾಡಲು ಸಾಧ್ಯವಿಲ್ಲ. ನಾವು ಯಾವುದೇ ಕಾನೂನುಬಾಹಿರ ಚಟುವಟಿಕೆಗೆ ಪ್ರೇರಣೆ ನೀಡಿಲ್ಲ. ರೆಹಮಾನ್ ಹತ್ಯೆ ಯಾಕಾಗಿ ನಡೆಯಿತು ಎಂಬ ಬಗ್ಗೆ ಪೊಲೀಸ್ ಇಲಾಖೆ ಇದುವರೆಗೆ ಮಾಹಿತಿ ನೀಡಿಲ್ಲ. ಪೊಲೀಸರ ಮಾಹಿತಿಗಾಗಿ ನಾವೂ ಕಾಯುತ್ತಿದ್ದೇವೆ ಎಂದು ಸುನೀಲ್ ಕೆ.ಆರ್. ಹೇಳಿದರು.
ಜಿಲ್ಲೆಯಲ್ಲಿ ಗೋವುಗಳ ಕಳ್ಳತನ, ಹತ್ಯೆ, ಮತಾಂತರ, ಲವ್ ಜಿಹಾದ್ ಗಲಭೆಗಳಿಗೆ ಕಾರಣ. ಇದನ್ನು ನಿಲ್ಲಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಹಿಂದು ಸಂಘಟನೆ ಕಾರ್ಯಕರ್ತರ ಮನೆಗಳಿಗೆ ರಾತ್ರಿ ವೇಳೆ ತೆರಳಿ ಪರಿಶೀಲನೆ ನಡೆಸುತ್ತಿರುವುದು ಖಂಡನೀಯ. ಹಿಂದುಗಳ ಸಹನೆಯ ಕಟ್ಟೆ ಒಡೆದರೆ ತಕ್ಕ ಉತ್ತರ ಸಿಗಬಹುದು ಎಂದರು.
ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಜಿಲ್ಲಾ ಗೋರಕ್ಷಾ ಪ್ರಮುಖ್ ಹರೀಶ್ ಶೇಟ್, ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಳ್ಳ, ಬಜರಂಗದಳ ಜಿಲ್ಲಾ ಸಂಯೋಜಕ್ ನವೀನ್ ಮೂಡುಶೆಡ್ಡೆ ಉಪಸ್ಥಿತರಿದ್ದರು.