
ಹಿಂದುಳಿದ ವರ್ಗಗಳಿಗೆ ಹೆಚ್ಚುವರಿ ಹಾಸ್ಟೆಲ್‌ಗಳಿಗೆ ಬೇಡಿಕೆ: ಕೆಡಿಪಿ ಸಭೆಯಲ್ಲಿ ಶಾಸಕರ ಒತ್ತಾಯ
ಮಂಗಳೂರು: ಶೈಕ್ಷಣಿಕ ಹಬ್ ಆಗಿ ಗುರುತಿಸಿಕೊಂಡಿರುವ ದ.ಕ. ಜಿಲ್ಲೆಗಳಿಗೆ ವಿವಿಧ ಜಿಲ್ಲೆಗಳಿಂದ ಮೆಟ್ರಿಕ್ ನಂತರದ ಉನ್ನತ ಶಿಕ್ಷಣಕ್ಕಾಗಿ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಹೆಚ್ಚುವರಿ ವಸತಿ ನಿಲಯ (ಹಾಸ್ಟೆಲ್)ಗಳನ್ನು ಒದಗಿಸಲು ಕ್ರಮ ವಹಿಸಬೇಕೆಂಬ ಬೇಡಿಕೆ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಶಾಸಕರಿಂದ ವ್ಯಕ್ತವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರಾದ ಐವನ್ ಡಿಸೋಜಾ, ಉಮಾನಾಥ ಕೋಟ್ಯಾನ್, ಧನಂಜಯ ಸರ್ಜಿ, ಬೋಜೇಗೌಡ ಮೊದಲಾದವರು ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಡಿ ಹೆಚ್ಚುವರಿ ಹಾಸ್ಟೆಲ್‌ಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
2025-26ನೆ ಸಾಲಿಗೆ ದ.ಕ. ಜಿಲ್ಲೆಗೆ ಬಾಲಕ ಬಾಲಕಿಯರಿಗೆ ಪ್ರತ್ಯೇಕ ತಲಾ ಒಂದರಂತೆ ಮೆಟ್ರಿಕ್ ನಂತರದ ಹಾಸ್ಟೆಲ್ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇಲಾಖೆಯಡಿ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿರುವ 8 ಹಾಸ್ಟೆಲ್‌ಗಳ ಪೈಕಿ 3 ಹಾಸ್ಟೆಲ್‌ಗಳ ಕಾಮಗಾರಿ ಪೂರ್ಣಗೊಂಡು ವಿದ್ಯಾರ್ಥಿ ನಿಲಯ ಆರಂಭಿಸಲಾಗಿದೆ. 2 ಹಾಸ್ಟೆಲ್‌ಗಳ ಕಟ್ಟಡ ಕಾಮಗಾರಿ ಜುಲೈ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಇನ್ನುಳಿದ 3 ಮೂರು ಹಾಸ್ಟೆಲ್‌ಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಇಲಾಖೆಯ ಉಪ ನಿರ್ದೇಶಕಿ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು ಪರದಾಟ ನಡೆಸುವಂತಾಗಿದೆ. ಶಿಕ್ಷಣ ಹಬ್‌ನಲ್ಲಿ ಸ್ವಂತ ಹಾಸ್ಟೆಲ್ ಕಟ್ಟಡಗಳ ಕೊರತೆ ಇದೆ ಎಂದು ಶಾಸಕ ಐವನ್ ಡಿಸೋಜಾ ಹೇಳಿದಾಗ, ಮುಲ್ಕಿಯಲ್ಲಿ ಪಿಯು ಕಾಲೇಜು ಇದೆ. ಅಲ್ಲಿ ಜಾಗ ಇದೆ ಕಟ್ಟಡವೂ ಇದೆ. ಆ ಕಟ್ಟಡವನ್ನು ಹಾಸ್ಟೆಲ್‌ಗೆ ಬಳಕೆ ಮಾಡಲು ಅವಕಾಶ ನೀಡಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಆಗ್ರಹಿಸಿದರು.
ಮೆಟ್ರಿಕ್ ನಂತರದ ಹಾಸ್ಟೆಲ್‌ಗಳ ಪ್ರಸ್ತಾವನೆಗೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆಯಬೇಕಾಗಿದೆ. ಸದ್ಯ ಹೆಚ್ಚುವರಿ ಹಾಸ್ಟೆಲ್ ನೀಡಲು ಆಗುವುದಿಲ್ಲ ಎಂದು ಹಣಕಾಸು ಇಲಾಖೆ ತನ್ನ ನಿರ್ಧಾರ ತಿಳಿಸಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ತುಳಸಿ ಮದ್ದಿನೇನಿ ತಿಳಿಸಿದರು.
ಉಸ್ತುವಾರಿ ಕಾರ್ಯದರ್ಶಿ ಜಿಲ್ಲೆಯ ಬಗ್ಗೆ ತಿಳಿದಿರುವುದರಿಂದ ಇಲ್ಲಿಗೆ ಹೆಚ್ಚುವರಿ ಹಾಸ್ಟೆಲ್ ಒದಗಿಸಲು ಕ್ರಮ ವಹಿಸಬೇಕು ಎಂದು ಐವನ್ ಡಿಸೋಜಾ ಹೇಳಿದರು.
5 ಲಕ್ಷ ರೂ.ವರೆಗೆ ಕೃಷಿ ಸಾಲ:
ಸಹಕಾರ ಸಚಿವರಿಗೆ ತಿಳಿಸಿ ಗೊಂದಲ ನಿವಾರಣೆ ಕೃಷಿಕರಿಗೆ ಐದು ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ನೀಡುವುದಾಗಿ ಬಜೆಟ್‌ನಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದರೂ ಇನ್ನೂ ಸಿಗುತ್ತಿಲ್ಲ ಎಂದು ಸಭೆಯಲ್ಲಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ನಬಾರ್ಡ್‌ನಿಂದ ಬರುವ ಹಣದಲ್ಲಿ ಕಡಿತವಾಗಿದೆ. ಇದರಿಂದ ತೊಂದರೆ ಆಗಿದೆ ಎಂದಾಗ, ಬಜೆಟ್‌ನಲ್ಲಿ ಘೋಷಿಸಿರುವುದರಿಂದ ಈ ಬಗ್ಗೆ ಅಗತ್ಯ ಕ್ರಮ ಸರಕಾರ ಕೈಗೊಳ್ಳಬೇಕು. ಸಾಧ್ಯವಿಲ್ಲ ಎಂದಾದರೆ ರೈತರ ಗೊಂದಲ ನಿವಾರಣೆ ಮಾಡಬೇಕು ಎಂದು ಶಾಸಕರಾದ ಬೋಜೇಗೌಡ, ಪ್ರತಾಪ ಸಿಂಹ ನಾಯಕ್, ಹರೀಶ್ ಪೂಂಜಾ ಮೊದಲಾದವರು ಆಗ್ರಹಿಸಿದರು.
ಈ ಸಂದರ್ಭ ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ನ ಆಡಳಿತ ನಿರ್ದೇಶಕರ ಬದಲಿಗೆ ಜನರಲ್ ಮ್ಯಾನೇಜರ್ ಉಪಸ್ಥಿತರಿದ್ದು, ಮಾಹಿತಿ ನೀಡಲು ಮುಂದಾದಾಗ ಶಾಸಕ ಬೋಜೇಗೌಡರು ಅವರನ್ನು ತರಾಟೆಗೈದ ಪ್ರಸಂಗ ನಡೆಯಿತು.
ಸಭೆಗೆ ಬ್ಯಾಂಕ್‌ನ ಆಡಳಿತ ನಿರ್ದೇಶಕರು ಭಾಗವಹಿಸಬೇಕು. ಅನಿವಾರ್ಯ ಕಾರಣದಿಂದ ಬರಲು ಸಾಧ್ಯವಿಲ್ಲ ಎಂದಾಗ ಜಿಲ್ಲಾಧಿಕಾರಿ ಗಮನಕ್ಕೆ ತರಬೇಕು. ಈ ಬಗ್ಗೆ ಮಾಹಿತಿ ಇದೆಯೇ ಎಂದು ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದಾಗ, ಅವರ ಅನುಪಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದರಲ್ಲದೆ, ಈ ಬಗ್ಗೆ ನೋಟೀಸು ನೀಡಿ ವಿಚಾರಣೆ ಮಾಡುವುದಾಗಿ ಹೇಳಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಈ ವರ್ಷ ನಬಾರ್ಡ್‌ನಿಂದ 2600 ಕೋಟಿ ರೂ. ಹಣ ಕಡಿತ ಮಾಡಲಾಗಿದೆ. ಈ ಬಗ್ಗೆ ನಬಾರ್ಡ್‌ಗೆ ಪತ್ರ ಬರೆಯಲಾಗಿದೆ. ಐದು ಲಕ್ಷ ರೂ.ವರೆಗಿನ ಸಾಲ ವಿತರಣೆಗೆ ಸಂಬಂಧಿಸಿ ಸಹಕಾರ ಸಚಿವರಿಗೆ ತಿಳಿಸಿ ಸದ್ಯ ಇರುವ ಗೊಂದಲ ನಿವಾರಣೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಬಳ್ಕುಂಜೆ-ಪಲಿಮಾರು ಸೇತುವೆ ದುರಸ್ತಿಗೆ ಆಗ್ರಹ:
ಬಳ್ಕುಂಜೆ-ಪಲಿಮಾರು ಸೇತುವೆ ನಾದುರಸ್ತಿಯಲ್ಲಿದ್ದು, ಕಳೆದ ಒಂದೂವರೆ ವರ್ಷದಿಂದ ಬಂದ್ ಆಗಿದೆ. ಸಾವಿರಾರು ವಾಹನ ಓಡಾಡುವ ಈ ಸೇತುವೆಯ ದುರಸ್ತಿಗೆ ಯಾವುದೇ ಕ್ರಮ ಆಗಿಲ್ಲ. ಹೊಸ ಸೇತುವೆ ನಿರ್ಮಾಣಕ್ಕೆ ನೀಡಲಾಗುವ ಒತ್ತು ಈ ಸೇತುವೆಯ ದುರಸ್ತಿ ಅಥವಾ ಹೊಸತಾಗಿ ನಿರ್ಮಿಸುವ ಕುರಿತಂತೆಯೂ ಆದ್ಯತೆ ನೀಡಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಆಗ್ರಹಿಸಿದರು.
ತುರ್ತಾಗಿ ಆಗಬೇಕಾಗಿರುವ ಸೇತುವೆಗಳ ದುರಸ್ತಿ ಕಾರ್ಯದ ಬಗ್ಗೆ ಪಟ್ಟಿ ಮಾಡಿ ನೀಡುವಂತೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸರ್ವೇಯರ್‌ಗಳ ನೇಮಕಕ್ಕೆ ವಿಶೇಷ ಆದ್ಯತೆಗೆ ಒತ್ತಾಯ:
ಜಿಲ್ಲೆಯಲ್ಲಿ ಸರ್ವೇಯರ್‌ಗಳ ಸಮಸ್ಯೆ ಸಾಕಷ್ಟಿದ್ದು, ವಿಶೇಷ ಪ್ಯಾಕೇಜ್ ಆಗಿ ಪೈಲಟ್ ಮಾದರಿಯಲ್ಲಿ ಕ್ರಮಕ್ಕೆ ಮಂದಾಗಬೇಕು ಎಂದು ಶಾಸಕ ಪ್ರತಾಪ ಸಿಂಹ ನಾಯಕ್ ಅವರು ಸಭೆಯಲ್ಲಿ ಆಗ್ರಹಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಸಚಿವ ದಿನೇಶ್ ಗುಂಡೂರಾವ್, ಸುಳ್ಯ, ಬೆಳ್ತಂಗಡಿ, ಪುತ್ತೂರು ತಾಲೂಕುಗಳಲ್ಲಿ ವಿಶೇಷ ತಂಡ ರಚನೆ ಮಾಡಿ ಸಂಪೂರ್ಣ ಸರ್ವೆ ಆಡಿ ಅರಣ್ಯ ಹಾಗೂ ಕಂದಾಯ ಭೂಮಿಯನ್ನು ಗುರುತಿಸುವ ಬಗ್ಗೆ ಕಂದಾಯ ಸಚಿವರು ಈಗಾಗಲೇ ಆಸಕ್ತಿ ವಹಿಸಿದ್ದಾರೆ ಎಂದರು.
ನೀಲಗಿರಿ, ಅಕೇಶಿಯ ಮರಗಳ ತೆರವಿಗೆ ಕ್ರಮ
ರಾಜ್ಯದಲ್ಲಿ ನೀಲಗಿರಿ ಹಾಗೂ ಅಕೇಶಿಯಾ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ 2016ರಲ್ಲಿ ಆದೇಶವಾಗಿದೆ. ಪ್ರಾಣಿ ಪಕ್ಷಿ ಸಂಕುಲಗಳಿಗೆ ಬದುಕುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದ್ದರೂ ಅರಣ್ಯ ಇಲಾಖೆಯಿಂದ ಕ್ರಮ ಆಗುತ್ತಿಲ್ಲ ಎಂದು ಶಾಸಕ ಬೋಜೇಗೌಡರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಉಪ ಅರಣ್ಯ ಸಂರ‌್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ, 2017ರಿಂದ ನೀಲಗಿರಿ ಹಾಗೂ ಅಕೇಶಿಯಾ ಮರಗಳನ್ನು ತೆರವುಗೊಳಿಸಿ ಅವುಗಳ ಜಾಗದಲ್ಲಿ ಹಣ್ಣು ಹಂಪಲಿನ ಗಿಡಗಳನ್ನು ಬೆಳೆಸುವ ಕ್ರಮವಾಗುತ್ತಿದೆ. 10 ವರ್ಷಗಳ ಅವಧಿಯಲ್ಲಿ ಸಂಪೂರ್ಣ ತೆರವಿಗೆ ಯೋಜನೆ ರೂಪಿಸಲಾಗಿದೆ. 2023ರವರೆಗೆ 730 ಹೆಕ್ಟೇರ್ ಪ್ರದೇಶದಲ್ಲಿ ಈ ಮರಗಳನ್ನು ತೆರವುಗೊಳಿಸಲಾಗಿದ್ದು, ಕಳೆದ ವರ್ಷ 353 ಹೆಕ್ಟೇರ್ ಪ್ರದೇಶದಲ್ಲಿ ತೆರವು ಕಾರ್ಯ ನಡೆದಿದೆ. ಈ ವರ್ಷ 500 ಹೆಕ್ಟೇರ್ ಪ್ರದೇಶದಲ್ಲಿ ತೆರವಿಗೆ ಯೋಜನೆ ರೂಪಿಸಲಾಗಿದೆ ಎಂದರು.
ಆ ಮರಗಳನ್ನು ಕಡಿದರೆ ಸಾಕಾಗದು. ಬುಡ ಸಹಿತ ತೆಗೆಯಬೇಕು. ಇಲ್ಲವಾದಲ್ಲಿ ಮತ್ತೆ ಬೆಳೆಯುತ್ತದೆ ಎಂದು ಬೋಜೇಗೌಡರು ಸಲಹೆ ನೀಡಿದರು.