
ಕಾಳಿಕಾಂಬಾ ಮಹಿಳಾ ಸಮಿತಿಯಿಂದ ಗೊಂಡೆ ತಯಾರಿ ತರಬೇತಿ
ಮೂಡುಬಿದಿರೆ: ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಬ್ಯಾಂಕ್ ಆಫ್ ಬರೋಡ ಸಹಭಾಗಿತ್ವದೊಂದಿಗೆ ವಿಶ್ವಕರ್ಮ ಸಭಾಭವನದಲ್ಲಿ ಏಳು ದಿನಗಳ ಕಾಲ ನಡೆಯುವ ಸೀರೆಗೆ ಗೊಂಡೆ ಹಾಕುವ ತರಬೇತಿ ಶಿಬಿರವು ಸೋಮವಾರದಂದು ಆರಂಭಗೊಂಡಿತು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕರಕೌಶಲ್ಯದಿಂದ ತಯಾರಾಗುವ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದೆ. ಉತ್ತಮ ಮಾರುಕಟ್ಟೆಯೂ ಲಭಿಸುತ್ತದೆ. ಹೊಲಿಗೆಯ ಜೊತೆಗೆ ಗೊಂಡೆ ತಯಾರಿ, ಎಂಬ್ರಾಯಿಡರಿಯನ್ನು ಕಲಿತರೆ ಉತ್ತಮ ಆದಾಯ ಗಳಿಸಬಹುದು. ಈ ಉದ್ಯಮ ಸ್ಥಾಪನೆಗೆ ಪಿ.ಎಂ ವಿಶ್ವಕರ್ಮ ಯೋಜನೆ, ಪ್ರಧಾನಮಂತ್ರಿ ಮುದ್ರಾ ಯೋಜನೆಯ ಮೂಲಕ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದರು.
ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಮಾತನಾಡಿ, ‘ವಿಶ್ವಕರ್ಮರಿಗೆ ಕೌಶಲ್ಯ ದೇವರು ಕೊಟ್ಟ ವರ. ಅದನ್ನು ಸದ್ಭಳಕೆ ಮಾಡಿ. ತರಬೇತಿ ಪಡೆದರೆ ಸಾಲದು, ಅದನ್ನು ಉದ್ಯೋಗವಾಗಿ ಮುಂದುವರಿಸಿ ಎಂದರು.
ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಆಚಾರ್ಯ ಉಳಿಯ, ಮೊಕ್ತೇಸರರಾದ ಶಿವರಾಮ ಆಚಾರ್ಯ ಉಳಿಯ, ಯೋಗೀಶ್ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಾಥ ಆಚಾರ್ಯ ಶುಭ ಹಾರೈಸಿದರು. ವಿಚೀಸ್ ಕೌಶಲ್ಯಪರ ತರಬೇತಿ ಕೇಂದ್ರದ ನಿರ್ದೇಶಕಿ ಶುಭಲಕ್ಷ್ಮೀ ಪ್ರವೀಣ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.
ವಿದ್ಯಾ ಸುರೇಶ್ ವಂದಿಸಿದರು. ರಶ್ಮಿತಾ ಅರವಿಂದ್ ಕಾರ್ಯಕ್ರಮ ನಿರ್ವಹಿಸಿದರು.