 
‘ಸೇವೆಯಲ್ಲಿ ಶ್ರೇಷ್ಠತೆ, ಶ್ರೇಷ್ಠತೆಯಲ್ಲಿ ಯಶಸ್ಸು’ ನಿಮ್ಮ ಆದ್ಯತೆಯಾಗಲಿ: ಡಾ ಆಳ್ವ
Monday, June 30, 2025
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ 2021ನೇ ಸಾಲಿನ ಪದವಿ ವಿದ್ಯಾರ್ಥಿಗಳಿಗೆ ‘ಸಂಪನ್ನಂ’ ಬೀಳ್ಕೊಡುಗೆ ಸಮಾರಂಭ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಡಾ. ಎಂ. ಮೋಹನ ಆಳ್ವ ವಿದ್ಯಾರ್ಥಿಗಳಿಗೆ ಶುಭಹಾರೈಸಿ ಮಾತನಾಡಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ನಿರಂತರ ಸಫಲತೆಯನ್ನು ಸಾಧಿಸಿದೆ. ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಕೇವಲ ಪಡೆದುಕೊಳ್ಳಬೇಕು ಎಂಬುದಕ್ಕೆ ಮಾತ್ರ ಸೀಮಿತರಾಗದೆ, ಅದನ್ನು ಉಳಿಸಿಕೊಂಡು, ತಾವು ಅಪೇಕ್ಷಿಸಿದ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ಮತ್ತಷ್ಟು ಬೆಳೆಯಬೇಕಾದ ಜವಾಬ್ದಾರಿಯು ಇದೆ ಎಂದರು.
ಇಂದಿನ ಯುಗದಲ್ಲಿ ಆಯುರ್ವೇದದ ಜೊತೆಗೆ ವೈಜ್ಞಾನಿಕ, ತಾಂತ್ರಿಕ ಮತ್ತು ಸಂಶೋಧನಾ ವಿಚಾರಗಳನ್ನು ಸಮನ್ವಯಗೊಳಿಸಿ ಹೊಸ ದಿಕ್ಕಿನಲ್ಲಿ ಉತ್ತಮ ಸಾಧನೆಗಳನ್ನು ಮಾಡಬಹುದಾದ ಅನೇಕ ಅವಕಾಶಗಳು ಲಭ್ಯವಿವೆ. ಅಂತಹ ಅವಕಾಶಗಳನ್ನು ವಿದ್ಯಾರ್ಥಿಗಳೇ ತಾವಾಗಿ ಅನ್ವೇಷಿಸಿ, ಮುಂದಕ್ಕೆ ಸಾಗಬೇಕಾಗಿದೆ. ‘ಇಂದಿನಿಂದ ನೀವು ಹೊಸ ಜಗತ್ತಿಗೆ ಹೆಜ್ಜೆ ಇಡುತ್ತಿರುವಿರಿ. ಆ ಜಗತ್ತು ಪರೀಕ್ಷೆ ಮಾಡಬಹುದು, ಪ್ರಶ್ನಿಸಬಹುದು, ಆದರೆ ನಿಮ್ಮ ವಿದ್ಯೆಯ ಮೇಲೆ, ನಿಮ್ಮ ಮೌಲ್ಯಗಳ ಮೇಲೆ ನಂಬಿಕೆ ಇಟ್ಟು ಮುನ್ನಡೆಯಿರಿ. ಆಯುರ್ವೇದ ಕೇವಲ ಚಿಕಿತ್ಸೆಯ ಮಾಧ್ಯಮವಲ್ಲ, ಅದು ಜೀವನ ಶೈಲಿಯಾಗಿ, ಆ ಶೈಲಿಯನ್ನು ಪ್ರತಿಯೊಬ್ಬ ರೋಗಿಗೂ ತಲುಪಿಸುವ ಕಾರ‍್ಯ ನಿಮ್ಮಿಂದಾಗಲಿ’ ಎಂದರು.
ಪ್ರಸ್ತುತ ಜಗತ್ತಿನಲ್ಲಿ ಯಶಸ್ಸು ಎಂದರೆ ಸಂಪತ್ತು ಅಥವಾ ಹುದ್ದೆ ಅಂತಲೇ ಅರ್ಥೈಸಲಾಗುತ್ತಿದೆ. ಆದರೆ ನಿಜವಾದ ಯಶಸ್ಸು ಎಂದರೆ ನೀವು ಎಷ್ಟು ಮಂದಿಗೆ ನೆರವಾಗುತ್ತಿರಿ, ಸಮಾಜದ ಮೇಲಿನ ನಿಮ್ಮ ಪ್ರಭಾವ ಎಷ್ಟು ಸಕಾರಾತ್ಮಕವಾಗಿದೆ ಎಂಬುದರಲ್ಲಿ ಇದೆ. ‘ಸೇವೆಯಲ್ಲಿ ಶ್ರೇಷ್ಠತೆ, ಶ್ರೇಷ್ಠತೆಯಲ್ಲಿ ಯಶಸ್ಸು’ ಎಂಬುದು ನಿಮ್ಮ ಆದ್ಯತೆಯಾಗಲಿ ಎಂದರು.
ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಪ್ರಶಾಂತ್ ಜೈನ್, ಪದವಿ ವಿಭಾಗದ ಡೀನ್ ಡಾ. ಸಪ್ನ ಕುಮಾರಿ, ತರಗತಿ ಸಂಯೋಜಕರಾದ ಡಾ. ರೋಹಿಣಿ ಪುರೋಹಿತ್ ಮತ್ತು ಡಾ. ವಿನೀತಾ ಡಿಸೋಜ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ. ಸ್ವಾಗತಿಸಿ, ಡಾ. ವಿಜಯಲಕ್ಷ್ಮಿ ವಂದಿಸಿದರು. ಡಾ. ಗೀತಾ ನಿರೂಪಿಸಿದರು.

