
ಪರಿಸರ ದಿನಾಚರಣೆ: ಅಳಿಯೂರು ಶಾಲೆಯಲ್ಲಿ ವಿವಿಧ ಕಾಯ೯ಕ್ರಮಗಳು, ಜಾಗೃತಿ ಜಾಥಾ
Friday, June 6, 2025
ಮೂಡುಬಿದಿರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸರಕಾರಿ ಪ್ರೌಢಶಾಲೆ ಅಳಿಯೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಯಿತು.
ಕರ್ನಾಟಕ ಅರಣ್ಯ ಇಲಾಖೆ ಮೂಡುಬಿದಿರೆ ವಲಯ ಶಿರ್ತಾಡಿ ಶಾಖೆ ವತಿಯಿಂದ ಸುಮಾರು 25 ಗಿಡಗಳನ್ನು ಶಾಲೆಗೆ ವಿತರಣೆ ಮಾಡಲಾಯಿತು. ನಂತರ ತಾಯಿಯ ಹೆಸರಲ್ಲಿ ಒಂದು ಗಿಡ, 'ಏಕ್ ಪೇಡ್ ಮಾ ಕಾ ನಾಮ್ ' ಎಂಬ ಕಾರ್ಯಕ್ರಮದಡಿಯಲ್ಲಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಸಭಾ ಕಾಯ೯ಕ್ರಮದಲ್ಲಿ ಉಪ ವಲಯಾರಣ್ಯಾಧಿಕಾರಿ ಬಸಪ್ಪ ಹಲಗೇರ ಅವರು ವಿದ್ಯಾರ್ಥಿಗಳಿಗೆ ಅರಣ್ಯ ಸಂರಕ್ಷಣೆಯ ಬಗ್ಗೆ, ಪ್ಲಾಸ್ಟಿಕ್ ನಿಂದ ಪರಿಸರಕ್ಕೆ, ಜೀವಿಗಳಿಗಾಗುವ ಹಾನಿಯ ಬಗ್ಗೆ ಸವಿವರ ಮಾಹಿತಿಯನ್ನು ನೀಡಿದರು.
ಅರಣ್ಯ ಪಾಲಕ ಧರ್ಮರಾಜ ಗಸ್ತು ಅವರು ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಒಂದು ಗಿಡವನ್ನು ನೆಟ್ಟು ಪೋಷಿಸಬೇಕು ಎಂದು ತಿಳಿಸಿದರು ಹಾಗೂ ಪ್ಲಾಸ್ಟಿಕ್ ಮುಕ್ತ ಪರಿಸರದ ಅಗತ್ಯತೆಯನ್ನು ತಿಳಿಸಿದರು.
ಶಾಲಾ ಕನ್ನಡ ಶಿಕ್ಷಕ ಮಹದೇವ, ರೇಖಾ ಕೃಪಾ, ಪದ್ಮಿನಿ, ರಂಜನ ಕುಮಾರಿ, ಅತಿಥಿ ಶಿಕ್ಷಕರಾದ ಭಾಸ್ಕರ್ ಹಾಗೂ ಸುಚಿತ್ ಹಾಗೂ ಇತರರು ಉಪಸ್ಥಿತರಿದ್ದರು.
ವಿಜ್ಞಾನ ಶಿಕ್ಷಕರಾದ ಶ್ರೀಮತಿ ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.
ನಂತರ ವಿದ್ಯಾರ್ಥಿಗಳು ಪರಿಸರ ಜಾಗೃತಿ, ಘೋಷಣೆಗಳನ್ನು ಕೂಗುತ್ತಾ ಅಳಿಯೂರು ಪೇಟೆ ಕಡೆ ಜಾಥಾ ನಡೆಸಿದರು. ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಮುಕ್ತ ಪರಿಸರ ಎಂಬ ವಿಷಯದಲ್ಲಿ ಚಿತ್ರ ಕಲಾ ಸ್ಪರ್ಧೆಯನ್ನು ಇಕೋ ಕ್ಲಬ್ ವತಿಯಿಂದ ನಡೆಸಲಾಯಿತು.