.jpg)
ನನ್ನ ಮಗಳಿಗೆ ನ್ಯಾಯ ಕೊಡಿಸಿ.. ಕಣ್ಣೀರು ಹಾಕಿದ ತಾಯಿ...: ಹಿಂದೂ ಸಂಘಟನೆಗಳಿಂದಲೂ ಬೆಂಬಲ ಸಿಕ್ಕಿಲ್ಲ
ಪುತ್ತೂರು: ಮಗನಿಗೆ 21 ವರ್ಷ ತುಂಬಿದ ತಕ್ಷಣ ನಿಮ್ಮ ಮಗಳೊಂದಿಗೆ ಮದುವೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಪೊಲೀಸರಿಗೆ ದೂರು ಬೇಡ. ನಾನೇ ನಿಂತು ಮದುವೆ ಮಾಡಿಸುತ್ತೇನೆ ಎಂದಿದ್ದ ಯುವಕನ ತಂದೆ ಹಾಗೂ ಮನೆಯವರು ಇದೀಗ ಮಗನನ್ನು ಅಡಗಿಸಿಟ್ಟು ಮೋಸ ಮಾಡುತ್ತಿದ್ದಾರೆ. ನನ್ನ ಮಗಳು ಈಗ ಗಂಡುಮಗುವಿನ ತಾಯಿಯಾಗಿದ್ದಾಳೆ. ನನ್ನ ಮಗಳಿಗೆ ನ್ಯಾಯಕೊಡಿಸಿ-ಇದು ಪುತ್ತೂರಿನ ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ರಾವ್ ಎಂಬಾತನಿಂದ ವಂಚನೆಗೀಡಾದ ಹೆಣ್ಣು ಮಗಳ ತಾಯಿ ನಮಿತಾ ಮಾದ್ಯಮಗಳ ಮುಂದೆ ಕಣ್ಣೀರು ಹಾಕಿ ಬೇಡಿಕೊಂಡ ಪರಿ.
ನನ್ನ ಮಗಳು ಮತ್ತು ಶ್ರೀಕೃಷ್ಣ ರಾವ್ ಕಳೆದ ಏಳೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮಗಳು ಗರ್ಭಿಣಿಯಾದಾಗ ನಾವು ಪೊಲೀಸ್ ಠಾಣೆಯ ಮೆಟ್ಟಲು ಹತ್ತಿದೆವು. ಆದರೆ ಹುಡುಗನ ತಂದೆ ಜಗನ್ನೀವಾಸ ರಾವ್ ಅವರು ಅವರಿಬ್ಬರಿಗೆ ಕಾನೂನುಬದ್ಧ ವಿವಾಹ ನಡೆಸುವ. ದೂರು ಕೊಡೋದು ಬೇಡ. ಹುಡುಗನಿಗೆ ಜೂನ್ 23ಕ್ಕೆ 21 ವರ್ಷ ತುಂಬಿದ ತಕ್ಷಣ ಮದುವೆ ಮಾಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟ ಕಾರಣ ನಾವು ದೂರು ನೀಡಿಲ್ಲ. ಈ ಸಂದರ್ಭದಲ್ಲಿ ಪುತ್ತೂರಿನ ಶಾಸಕ ಅಶೋಕ್ ರೈ ಅವರೂ ದೂರವಾಣಿಯಲ್ಲಿ ನನ್ನ ಜತೆಗೆ ಮಾತನಾಡಿ, ವಿವಾಹ ಮಾಡುತ್ತೇವೆ ಎಂದು ಹುಡುಗನ ಕಡೆಯವರು ಹೇಳಿದ್ದಾರೆ. ಹಾಗಾಗಿ ದೂರು ಕೊಡಬೇಡಿ ಎಂದಿದ್ದರು. ಇವರೆಲ್ಲರ ಮಾತುಗಳನ್ನು ನಂಬಿ ನಾವು ದೂರು ದಾಖಲಿಸಿಲ್ಲ ಎಂದು ಅವರು ತಿಳಿಸಿದರು.
ಮಗುವನ್ನು ತೆಗೆಸಲು ಒತ್ತಡ:
ನನ್ನ ಪುತ್ರಿಯ ಮಗುವನ್ನು ತೆಗೆಸಲು ಹುಡುಗನ ತಂದೆ ಹಲವಾರು ಒತ್ತಡಗಳನ್ನು ತಂದಿದ್ದರು. ಈ ಹಿನ್ನಲೆಯಲ್ಲಿ ಮಂಗಳೂರಿನ ಎರಡು ಆಸ್ಪತ್ರೆಗಳಿಗೆ ಹೋಗಿದ್ದೆವು. ಆದರೆ ಮಗುವಿಗೆ ಏಳೂವರೆ ತಿಂಗಳಾದ ಕಾರಣ ಮಗುವನ್ನು ತೆಗೆಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಒಂದು ವೇಳೆ ಮಗುವನ್ನು ತೆಗೆಯಲು ಪ್ರಯತ್ನ ಪಟ್ಟರೆ ತಾಯಿಯ ಜೀವಕ್ಕೆ ಅಪಾಯ ಎಂದು ಎಚ್ಚರಿಸಿದ್ದರು. ಅದಾದ ಬಳಿಕ ಹುಡುಗನ ತಂದೆ ನಮ್ಮಲ್ಲಿಗೆ ಬಂದು ಬಂಟ್ವಾಳದ ನಮ್ಮ ಆತ್ಮೀಯ ವೈದ್ಯರೊಬ್ಬರು ಮಗುವನ್ನು ಗರ್ಭದಲ್ಲಿಯೇ ತುಂಡು ತುಂಡು ಮಾಡಿ ತೆಗೆಯುತ್ತಾರೆ. ಇದಕ್ಕೆ ೪.೫ ಲಕ್ಷ ವೆಚ್ಚವಾಗುತ್ತದೆ. ಅದನ್ನು ನಾವೇ ಕೊಡುತ್ತೇವೆ ಎಂದು ಹೇಳಿದಾಗ ನಾವದಕ್ಕೆ ಒಪ್ಪಲಿಲ್ಲ ಎಂದು ಅವರು ತಿಳಿಸಿದರು.
ಹಿಂದೂ ಮುಖಂಡನ ಡೀಲ್..:
ಜೂನ್ 22 ರಂದು ನಮ್ಮ ಮನೆಯಲ್ಲಿ ಹುಡುಗನ ತಂದೆ, ದೊಡ್ಡಪ್ಪ, ದೊಡ್ಡಮ್ಮ ಮತ್ತು ಲಕ್ಷ್ಮೀ ಬೆಟ್ಟದ ಇಬ್ಬರು ಬಂದು ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ನಮ್ಮ ಮನೆಗೆ ಬಂದ ಶ್ರೀಕೃಷ್ಣ ನಾನು ಮದುವೆಯಾಗೋದಿಲ್ಲ. ಆ ಮಗು ನನ್ನದಲ್ಲ. ಏನುಬೇಕಾದರೂ ಮಾಡಿ. ಆಕೆಯ ಜತೆಗೆ ಇನ್ನು ನಾಲ್ಕು ಹುಡುಗರಿದ್ದಾರೆ ಎಂದು ಹೇಳಿಹೋಗಿದ್ದಾನೆ. ಹುಡುಗನ ತಂದೆ ನೀವು ಮನೆ ಬಿಟ್ಟು ಎಲ್ಲಿಗಾದರೂ ಹೋಗಿ. ಇಲ್ಲದಿದ್ದರೆ ಜೀವಕ್ಕೆ ಅಪಾಯ ಎಂದು ಬೆದರಿಕೆಯನ್ನೂ ಹಾಕಿದ್ದಾರೆ. ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಶರಣ್ ಪಂಪ್‌ವೆಲ್, ಮುರಳೀಕೃಷ್ಣ ಹಸಂತಡ್ಕ ಅವರಲ್ಲಿ ನಾವು ನಮ್ಮ ಸಮಸ್ಯೆ ಹೇಳಿಕೊಂಡು ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದೇವೆ. ಆದರೆ ಯಾರೂ ನಮ್ಮ ನೆರವಿಗೆ ಬರಲಿಲ್ಲ. ಈ ಸಮಯದಲ್ಲಿ ರೂ.10 ಲಕ್ಷ ಕೊಡಿಸುವುದಾಗಿ ಮರಳೀಕೃಷ್ಣ ಹಸಂತಡ್ಕ ಅವರು ನಮಗೆ ಆಮಿಷ ಒಡ್ಡಿದ್ದರು ಎಂದು ಅವರು ತಿಳಿಸಿದರು.
ಡಿಎನ್‌ಎ ಟೆಸ್ಟಿಗೆ ನಾವು ರೆಡಿ:
ಈಗ ತಾನೇ ಜನಿಸಿದ ಮಗುವಿನಲ್ಲಿ ಶ್ರೀಕೃಷ್ಣನ ಹೋಲಿಕೆ ಇದೆ. ನಾವು ಡಿಎನ್‌ಎ ತಪಾಸಣೆಗೆ ಸಿದ್ಧವಿದ್ದೇವೆ. ಆದರೆ ಆತನನ್ನು ಮನೆಯವರೇ ಅಡಗಿಸಿಟ್ಟಿದ್ದಾರೆ. ಇಷ್ಟು ದಿನದಿಂದ ಹುಡುಕುತ್ತಿದ್ದರೂ ಪೊಲೀಸರಿಗೆ ಹುಡುಗ ಸಿಗುತ್ತಿಲ್ಲ ಎಂದಾದರೆ ಕಾನೂನು ಏನು ಮಾಡುತ್ತಿದೆ. ಓರ್ವ ಹಿಂದೂ ಹೆಣ್ಣು ಮಗಳಿಗೆ ಆದ ಅನ್ಯಾಯವಾಗಿದ್ದರೂ ಹಿಂದೂ ಸಂಘಟನೆಗಳು ಯಾರೂ ಮಾತನಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಮಹಿಳಾ ಆಯೋಗ, ಮಾನವಹಕ್ಕು ಆಯೋಗವೂ ಸೇರಿದಂತೆ ಎಲ್ಲರಿಗೂ ದೂರು ನೀಡುತ್ತೇವೆ. ನನ್ನ ಮಗಳಿಗೆ ನ್ಯಾಯ ಸಿಗಬೇಕು. ನ್ಯಾಯ ಸಿಗದೇ ಇದ್ದಲ್ಲಿ ಪ್ರತಿಭಟನೆಗೂ ಸಿದ್ಧವಾಗಿದ್ದೇವೆ ಎಂದವರು ಹೇಳಿದರು. ಸಂತ್ರಸ್ತೆಯ ಚಿಕ್ಕಮ್ಮ ನಂದಿನಿ ಉಪಸ್ಥಿತರಿದ್ದರು.