
ಟ್ಯಾಂಕರ್ ಚಕ್ರದಡಿಗೆ ಸಿಲುಕಿ ಸ್ಕೂಟರ್ ಸವಾರ ದಾರುಣ ಮೃತ್ಯು
ಬಂಟ್ವಾಳ: ಬಿ.ಸಿ.ರೋಡಿನ ಅಜ್ಜಿಬೆಟ್ಟು ಕ್ರಾಸ್ ಬಳಿ ಟ್ಯಾಂಕರ್ ಲಾರಿ ಢಿಕ್ಕಿಯಾಗಿ ಬಳಿಕ ಅದರ ಚಕ್ರದಡಿಗೆ ಸಿಲುಕಿ ದ್ವಿಚಕ್ರ ವಾಹನ ಸವಾರ,
ಬಂಟ್ವಾಳ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಅಧಿಕಾರಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಮೃತರನ್ನು ಬಂಟ್ವಾಳ ತಾಲೂಕಿನ ಶಂಭೂರು ಕೊಪ್ಪಳ ನಿವಾಸಿ ಚಿದಾನಂದ (50) ಎಂದು ಗುರುತಿಸಲಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಚಿದಾನಂದ ಅವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಮಂಗಳೂರು ಕಡೆ ತೆರಳುತ್ತಿದ್ದ ಟ್ಯಾಂಕರ್ ಲಾರಿ ಢಿಕ್ಕಿಯಾಗಿದೆ. ಈ ಸಂದರ್ಭ ಢಿಕ್ಕಿಯ ರಭಸಕ್ಕೆ ಲಾರಿಯ ಚಕ್ರದಡಿ ಸಿಲುಕಿ ಅವರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಬಿ.ಸಿ.ರೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಅಜ್ಜಿಬೆಟ್ಟು ಕ್ರಾಸ್‌ನಲ್ಲಿ ಸ್ಕೂಟರನ್ನು ತಿರುಗಿಸಲು ಮುಂದಾದಾಗ ಮೇಲ್ಸ್‌ತುವೆಯ ಮೇಲಿನಿಂದ ಅತೀ ವೇಗ ಹಾಗೂ ಅಜಾಗರುಕತೆಯಿಂದ ಧಾವಿಸಿ ಬಂದ ಟ್ಯಾಂಕರ್ ಢಿಕ್ಕಿಯಾಗಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡರು.
ಶಂಭೂರು ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿರುವ ಪತ್ನಿ, ಓರ್ವ ಪುತ್ರಿ ಮತ್ತು ಓರ್ವ ಪುತ್ರನನ್ನು ಅವರು ಅಗಲಿದ್ದಾರೆ. ಇವರ ಅಕಾಲಿಕ ಸಾವಿಗೆ ಶ್ರೀ .ಕ್ಷೇ.ಧ.ಗ್ರಾ.ಯೋ.ಯ ಬಂಟ್ವಾಳ ಘಟಕದ ಯೋಜನಾಧಿಕಾರಿ ಜಯಾನಂದ ಪಿ. ಸಹಿತ ಸಿಬ್ಬಂದಿ ವರ್ಗ ತೀವ್ರ ಶೋಕ ವ್ಯಕ್ತಪಡಿಸಿದೆ.
ಅಪಘಾತ ವಲಯ:
ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ಮಧ್ಯೆ ಬಿ.ಸಿ. ರೋಡಿನ ಪ್ಲೈ ಓವರ್ ಎಂಡ್ ಪಾಯಿಂಟ್‌ನಲ್ಲಿ ಅಜ್ಜಿಬೆಟ್ಟುವಿಗೆ ತೆರಳುವ ನಿಟ್ಟಿನಲ್ಲಿ ಕ್ರಾಸ್ಸಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಈ ಕ್ರಾಸಿಂಗ್ ಇತ್ತೀಚಿಗಿನ ದಿನಗಳಲ್ಲಿ ಅಪಘಾತ ವಲಯವಾಗಿ ಗುರುತಿಸಿದೆ. ಇಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿ ಸಾವು-ನೋವುಗಳು ಉಂಟಾಗಿದೆ. ವಾರಕ್ಕೆ ಒಂದೆರಡಾದರೂ ಸಣ್ಣಪುಟ್ಟ ಅಪಘಾತ ನಡೆಯುತ್ತಲೇ ಇರುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದು, ಈ ಕ್ರಾಸಿಂಗ್ ಮುಚ್ಚುವಂತೆ ಒತ್ತಾಯಗಳು ಕೇಳಿಬಂದಿದೆ.
ಸೋಮವಾರ ನಡೆದ ಅಪಘಾತದಿಂದ ದಾರುಣವಾಗಿ ಸ್ಕೂಟರ್ ಸವಾರ ಸಾವನ್ನಪ್ಪಿದ ಬಳಿಕ ಈ ಕ್ರಾಸಿಂಗ್‌ನಲ್ಲಿ ಟ್ರಾಫಿಕ್ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಬೇಕೆಂಬುದು ಕೆಲವರು ಬೇಡಿಕೆಯನ್ನಿಟ್ಟಿದ್ದಾರೆ.
ಬಸ್ ತಂಗುದಾಣಕ್ಕೂ ಅಕ್ಷೇಪ:
ಈ ನಡುವೆ ಸೋಮಯಾಜಿ ಕಟ್ಟಡದ ಮುಂಭಾಗ ಲಯನ್ಸ್ ಕ್ಲಬ್ ಬಸ್ ತಂಗುದಾಣ ನಿರ್ಮಿಸಿರುವುದಕ್ಕೆ ಕೆಲವರು ಆಕ್ಷೇಪವೆತ್ತಿದ್ದಾರೆ. ಮೇಲ್ಸ್‌ತುವೆಯ ಮೇಲಿನಿಂದ ಅತೀ ವೇಗವಾಗಿ ವಾಹನಗಳು ಸಂಚರಿಸುತ್ತಿದ್ದು, ಇದರ ಮಧ್ಯೆ ಇಲ್ಲಿ ವಾಹನಗಳು ಕ್ರಾಸಿಂಗ್ ಮಾಡಿ ತಿರುಗುವಾಗ ಈ ಹೊಸ ಬಸ್ ತಂಗುದಾಣದಲ್ಲಿ ಬಸ್‌ಗಳು ರಸ್ತೆಯಲ್ಲೇ ನಿಲುಗಡೆಗೊಳಿಸಿ ಮತ್ತೊಂದು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವು ಸ್ಥಳೀಯವಾಗಿ ವ್ಯಕ್ತವಾಗಿದೆ.
ಈಗಾಗಲೇ ಸೋಮಯಾಜಿ ಕಟ್ಟಡದ ಮುಂಭಾಗ ಆಟೋರಿಕ್ಷಾ ಸಹಿತ ಖಾಸಗಿ ವಾಹನಗಳು ನಿಲುಗಡೆಯಾಗುತ್ತಿದ್ದು, ಇದೀಗ ಬಸ್ ತಂಗುದಾಣ ನಿರ್ಮಾಣದಿಂದ ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿಯಾಗಬಹುದೆಂಬದು ಸ್ಥಳೀಯರ ಅಭಿಪ್ರಾಯ.