
ಹಿಂದು ಹೆಣ್ಣುಮಗಳಿಗೆ ಅನ್ಯಾಯ-ಹಿಂದೂ ಮುಖಂಡರು ಎಲ್ಲಿ ಆಡಗಿದ್ದಾರೆ...: ಅಲಿ ಪ್ರಶ್ನೆ
ಪುತ್ತೂರು: ಹೆಣ್ಣು ಮಗಳಿಗೊಬ್ಬಳಿಗೆ ಪುತ್ತೂರಿನಲ್ಲಿ ಅನ್ಯಾಯವಾಗಿದೆ. ಆಕೆಯನ್ನು ನಂಬಿಸಿ ಅತ್ಯಾಚಾರ ಮಾಡಿ ವಂಚನೆ ಮಾಡಲಾಗಿದೆ. ಆದರೆ ಈ ಅನ್ಯಾಯದ ಬಗ್ಗೆ ಹಿಂದೂ ಮುಖಂಡರ ಸಹಿತ ಯಾರೊಬ್ಬರೂ ಮಾತನಾಡುತ್ತಿಲ್ಲ. ಹಿಂದುತ್ವದ ಬಗ್ಗೆ ಮಾತನಾಡುವ ಹಿಂದೂ ಮುಖಂಡರು ಈಗ ಎಲ್ಲಿ ಅಡಗಿದ್ದಾರೆ. ಹೆಣ್ಣುಮಗಳಿಗಾದ ಅನ್ಯಾಯದ ಘಟನೆಯನ್ನು ಸಮಾಜ ಯಾಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಏನೂ ಆಗಿಲ್ಲ ಎಂಬಂತೆ ಈ ಪ್ರಕರಣವನ್ನು ಬಿಂಬಿಸುವ ಕೆಲಸ ಮಾಡಲಾಗುತ್ತಿದೆ. ಈ ಪ್ರಕರಣದಲ್ಲಿ ಯಾರೆಲ್ಲಾ ಮಾತುಕತೆಗೆ ಪ್ರಯತ್ನ ಮಾಡಿದ್ದಾರೆಯೋ ಅವರೆಲ್ಲರಿಗೂ ಶಾಪ ತಟ್ಟಲಿದೆ ಎಂದು ನಗರ ಕಾಂಗ್ರೆಸ್ ಮುಖಂಡ ಹೆಚ್.ಮಹಮ್ಮದ್ ಅಲಿ ಹೇಳಿದರು.
ಪುತ್ತಿಲ ಎಲ್ಲಿ...!
ಆರೋಪಿ ಅಪ್ಪನನ್ನು ಬಂಧಿಸಿ:
ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಒಂದೂವರೆ ತಿಂಗಳ ಹಿಂದೆ ಪ್ರಕರಣ ಬೆಳಕಿಗೆ ಬಂದು ರಾಜಿ ಪಂಚಾಯಿತಿಗೆ ನಡೆಸಿ ಮದುವೆ ಮಾಡಿಸುತ್ತಾರೆಂಬ ತೀರ್ಮಾನಕ್ಕೆ ಬರಲಾಗಿದ್ದು, ಈಗ ಯುವಕ ಓಡಿ ಹೋಗಿರುವುದು ಬೆಳಕಿಗೆ ಬಂದಿದೆ. ಪುತ್ತೂರಿನಲ್ಲಿ ಯಾವುದೇ ಪ್ರಕರಣ ನಡೆದರೂ ಮುಂಚೂಣಿಯಲ್ಲಿರುತ್ತಿದ್ದ ಅರುಣ್ ಕುಮಾರ್ ಪುತ್ತಿಲ ಈಗ ಎಲ್ಲಿ ಹೋಗಿದ್ದಾರೆ. ವೈದ್ಯರೊಬ್ಬರಿಗೆ ಸಮಸ್ಯೆಯಾದಾಗ ಠಾಣೆಗೆ ಮುತ್ತಿಗೆ ಹಾಕಿ, ರಸ್ತೆ ತಡೆ ನಡೆಸಿದವರು ಈಗ ಯಾಕೆ ಮಾತನಾಡುತ್ತಿಲ್ಲ. ಈ ಪ್ರಕರಣದಲ್ಲಿ ಯಾರೆಲ್ಲಾ ಮಧ್ಯಸ್ತಿಗೆ ವಹಿಸಲು ಹೋಗಿದ್ದಾರೋ ಅವರೆಲ್ಲರ ಹೆಸರು ಬಹಿರಂಗವಾಗಬೇಕು. ಮಗ ಹೆಣ್ಣುಮಗಳನ್ನು ನಂಬಿಸಿ ವಂಚಿಸಿ ಪರಾರಿಯಾಗಿದ್ದರೂ ಆತನ ಅಪ್ಪ ಮಾತ್ರ ಆರಾಮವಾಗಿ ತಿರುಗಾಡುತ್ತಿದ್ದಾನೆ. ಯುವತಿಗೆ ಆರೋಪಿ ಆತನ ಮನೆಯಲ್ಲೇ ಅತ್ಯಾಚಾರ ನಡೆಸಿದ್ದು, ಈ ನೆಲೆಯಲ್ಲಿ ಆರೋಪಿಯ ಅಪ್ಪನನ್ನೂ ಬಂಧಿಸಬೇಕು. ಪೋಲಿಸರು ಆರೋಪಿಯ ಮನೆಯಲ್ಲೂ ತನಿಖೆ ನಡೆಸಬೇಕು. ಈ ಪ್ರಕರಣ ಮಾತ್ರವಲ್ಲದೆ ಆ ಮನೆಯಲ್ಲಿ ಬೇರೆ ಪ್ರಕರಣಗಳು ನಡೆದಿದೆಯೋ ಅನ್ನೋದನ್ನೂ ಪತ್ತೆ ಹಚ್ಚಬೇಕು ಎಂದು ಅವರು ಆಗ್ರಹಿಸಿದರು.
ಮುಚ್ಚಿ ಹಾಕುವ ಸಿದ್ದಾಂತವೇ..!:
ಮಾನವೀಯತೆ ಇರುವ ವ್ಯಕ್ತಿ ಯಾವ ಜಾತಿಯೂ ಕಾಣುವುದಿಲ್ಲ. ಹಿಂದುಗಳಿಗೆ ಹಿಂದುಗಳಿಂದ ಅನ್ಯಾಯವಾದಾಗ ಮುಚ್ಚಿಹಾಕುವ ಸಿದ್ದಾಂತವಾ ಇವರದ್ದು. ಕಾಂಗ್ರೆಸ್‌ನವರು ಈ ಘಟನೆಯಲ್ಲಿ ಇರುತ್ತಿದ್ದರೆ ಪುತ್ತೂರಿನಲ್ಲಿ ಏನಾಗುತ್ತಿತ್ತು. ವೈದ್ಯರಿಗೆ ನಿಂದನೆ ಮಾಡಿರುವುದು ದೊಡ್ಡ ಪ್ರಕರಣವೇ ಅಥವಾ ಯುವತಿಯನ್ನು ಗರ್ಭವತಿ ಮಾಡಿ, ಮೋಸ ಮಾಡುವುದು ದೊಡ್ಡ ಪ್ರಕರಣವಾ.. ಮಹಿಳೆಯರಿಗೆ ನ್ಯಾಯ ನೀಡಬೇಕಾದ ಮಹಿಳಾ ಠಾಣೆ ಪಂಚಾಯಿತಿ ಕಟ್ಟೆಯಾ.. ಘಟನೆಯ ಬಳಿಕ ನಗರಸಭೆಯ ಸಾಮಾನ್ಯಸಭೆಯಲ್ಲಿ ಮಾತನಾಡುವುದಾದರೆ ಮಾನ ಮರ್ಯಾದೆಯಿದೆಯಾ.. ಹುಡುಗನ ತಂದೆ ವಾಸ್ತುತಜ್ಞ ಅಲ್ಲ, ಆತ ವಾಸ್ತ್ಯಾಯನ ತಜ್ಞ ಎಂದು ಆಲಿ ಆರೋಪಿಸಿದರು.
ಕಾಂಗ್ರೆಸ್ ಮುಖಂಡರಾದ ಮೌರಿಸ್ ಮಸ್ಕರೇನಸ್, ಸುರೇಶ್ ಪೂಜಾರಿ, ಹರೀಶ್ ಆಚಾರ್ಯ, ರಶೀದ್ ಮುರ ಉಪಸ್ಥಿತರಿದ್ದರು.