
ಕುಸಿದ ಮೇಲ್ಛಾವಣಿ: ವಿದ್ಯಾರ್ಥಿಗಳು ಪಾರು
ಮಂಗಳೂರು: ತರಗತಿ ನಡೆಯುತ್ತಿದ್ದಾಗಲೇ ಶಾಲಾ ಕಟ್ಟಡದ ಹಂಚಿನ ಮೇಲ್ಛಾವಣಿ ಜೋರಾದ ಗಾಳಿಗೆ ಏಕಾಏಕಿ ಕುಸಿದು ಬಿದ್ದ ಘಟನೆ ಮಂಗಳೂಇಗೆ ಹೊರವಲಯದ ಪೇಜಾವರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದು ಹಂಚು ಜಾರುವುದನ್ನು ತಿಳಿದು ಮಕ್ಕಳು ಹೊರಗೆ ಓಡಿದ್ದರಿಂದ ಭಾರೀ ದೊಡ್ಡ ದುರಂತ ತಪ್ಪಿದೆ.
ಜೋಕಟ್ಟೆ ಸಮೀಪದ ಪೇಜಾವರ ಮೂಲ ಮಠದ ಬಳಿಯಿರುವ ಕೆಂಜಾರು ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಮಧ್ಯಾಹ್ನ 12.30ರ ವೇಳೆಗೆ ಘಟನೆಯಾಗಿದ್ದು ಗಾಳಿಗೆ ಒಂದು ಬದಿಯ ಹಂಚು ಜಾರುತ್ತಿದ್ದಂತೆ ಮಕ್ಕಳು ಹೊರಗೆ ಓಡಿ ಬಂದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ತರಗತಿ ಕೊಠಡಿಯಿದ್ದ ಆ ಭಾಗದ ಹಂಚು ಪೂರ್ತಿಯಾಗಿ ಕುಸಿದು ಕೆಳಕ್ಕೆ ಬಿದ್ದಿದೆ.
ಘಟನೆಯಲ್ಲಿ ಶೋನಿತ್ ಎಂಬ ಯುಕೆಜಿ ವಿದ್ಯಾರ್ಥಿಗೆ ತಲೆ ಮತ್ತು ಮುಖಕ್ಕೆ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗಷ್ಟೇ ಶಾಲೆಯನ್ನು ದುರಸ್ತಿ ಪಡಿಸಲಾಗಿತ್ತು. ಶಾಲೆಯಲ್ಲಿ 21 ವಿದ್ಯಾರ್ಥಿಗಳಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.