
‘ಕಾನೂನು-ಸಹೋದರತೆ’ಯಿಂದ ಜಿಲ್ಲೆ ಊಹಿಸಲಾಗದಷ್ಟು ಬೆಳವಣಿಗೆ: ದಿನೇಶ್ ಗುಂಡೂರಾವ್
ಪುತ್ತೂರು: ಬಂಡವಾಳ ಹಾಕಿದಷ್ಟೂ ಬೆಳೆಯುವ ದಕ ಜಿಲ್ಲೆಯಲ್ಲಿ ಕಾನೂನಿನ ಸುವ್ಯವಸ್ಥೆ ಹಾಗೂ ಸಹೋದರತ್ವವನ್ನು ಕಾಪಾಡಿಕೊಂಡರೆ ಮಂಗಳೂರು ಜಿಲ್ಲೆ ಬೆಳೆಯುವ ಮಟ್ಟವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಬುಧವಾರ ಪುತ್ತೂರಿನ ದರ್ಬೆ ಸಮೀಪ ವಾಣಿಜ್ಯ ತೆರಿಗೆಗಳ ಇಲಾಖೆಯ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ-265, ಲೆಕ್ಕಪರಿಶೋಧನೆ ಕಚೇರಿ ಹಾಗೂ ಜಾರಿ ವಿಭಾಗದ ಕಛೇರಿಗಳ ‘ವಾಣಿಜ್ಯ ತೆರಿಗೆ ಭವನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರನ್ನು ಹೊರತುಪಡಿಸಿದರೆ ರಾಜಸ್ವ ಸಂಗ್ರಹದಲ್ಲಿ ಮಂಗಳೂರು ಎರಡನೇ ಸ್ಥಾನ ಪಡೆದಿದೆ. ಇಂತಹ ಜಿಲ್ಲೆಯಲ್ಲಿ ಸೌಹಾರ್ಧತೆಗೆ ಮೊದಲ ಆದ್ಯತೆ ದೊರೆಯಬೇಕು ಎಂದ ಅವರು ಮಂಗಳೂರು ವಿಭಾಗದಲ್ಲಿ ಸರಕು ವಲಯದ 35,000 ಸೇವಾ ವಲಯದಲ್ಲಿ 12,000 ಸೇರಿದಂತೆ ಒಟ್ಟು 47 ಸಾವಿರ ತೆರಿಗೆ ಪಾವತಿದಾರರಿದ್ದಾರೆ. ಇಲ್ಲಿ 3,100 ಕೋಟಿಗೂ ಮಿಕ್ಕಿ ತೆರಿಗೆ ಪಾವತಿಯಾಗುತ್ತದೆ. ಪ್ರಾಮಾಣಿಕ ತೆರಿಗೆ ಪಾವತಿಗೆ ಜಿಲ್ಲೆ ಹೆಸರಾಗಿದೆ ಎಂದು ಶ್ಲಾಘಿಸಿದರು.
ಪುತ್ತೂರಿನ ಶಾಸಕರು ಉತ್ಸಾಹಿ, ಮುಂಚೂಣಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅಭಿವೃದ್ಧಿಯ ಪರವಾಗಿದ್ದಾರೆ. ಈ ಕಾರಣದಿಂದಲೇ ಕಷ್ಟವಾಗಿದ್ದ ಮೆಡಿಕಲ್ ಕಾಲೇಜು ಬಜೆಟ್ ನಲ್ಲಿ ಬರುವಂತೆ ಮಾಡಿದ್ದಾರೆ ಎಂದರು.
ವಂಚಿಸಲ್ಪಡುತ್ತಿದೆ ರಾಜ್ಯ ವಾಣಿಜ್ಯ ಇಲಾಖೆ ಸರ್ಕಾರಕ್ಕೆ ಹಣ ತರುವ ಇಲಾಖೆಯಾಗಿರುವುದರಿಂದ ಹೆಚ್ಚು ಮಹತ್ವದ್ದಾಗಿದೆ. ತೆರಿಗೆ ಪಾವತಿ ವಿಚಾರದಲ್ಲಿ ಕರ್ನಾಟಕ ದೇಶಕ್ಕೇ ಮಾದರಿಯಾಗಿದ್ದು, 2ನೇ ಸ್ಥಾನ ಪಡೆದಿದೆ. ಆದರೆ ದೇಶದಲ್ಲೇ ಅತೀ ಹೆಚ್ಚು ಅನ್ಯಾಯ ಕರ್ನಾಟಕಕ್ಕೆ ಆಗುತ್ತಿದೆ. 15ನೇ ಹಣಕಾಸು, ಇತರ ಗ್ರ್ಯಾಂಟ್‌ಗಳು ರಾಜ್ಯಕ್ಕೆ ಸಿಗುತ್ತಿಲ್ಲ. ಹತ್ತಾರು ಸಾವಿರ ಕೋಟಿ ಪ್ರತಿ ವರ್ಷ ವಂಚನೆಯಾಗುತ್ತಿದೆ ಎಂದು ಗುಂಡೂರಾವ್ ಹೇಳಿದರು.
ಅಧ್ಯಕ್ಷತೆ ವಹಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕಾಂಗ್ರೆಸ್ ಎಂದಿಗೂ ಡಬಲ್ ಗೇಮ್ ಮಾಡುವುದಿಲ್ಲ. ಸ್ವತ: ಮುಖ್ಯಮಂತ್ರಿಗಳೇ ಎಲ್ಲರಿಗೂ ಒಂದೇ ರೀತಿಯ ಅನುದಾನ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ತೆರಿಗೆ ಸಂಗ್ರಹ ಮಾಡುವುದ ಮಾತ್ರವಲ್ಲ, ಕಚೇರಿಗಳೂ ಚೆನ್ನಾಗಿರಬೇಕು ಎಂದು ಪುತ್ತೂರಿಗೆ ತುರ್ತು ಅನುದಾನ ಬಿಡುಗಡೆ ಮಾಡಿ ಒಂದೇ ವರ್ಷದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪುತ್ತೂರಿನ ಆರೋಗ್ಯ ಇಲಾಖೆಗೆ 4 ಕೋಟಿ, 6 ಪಿ.ಎಚ್.ಸಿ. ಸೇರಿದಂತೆ 40 ಕೋಟಿಯಷ್ಟು ಅನುದಾನ ಪುತ್ತೂರಿಗೆ ಆರೋಗ್ಯ ಸಚಿವರು ನೀಡಿದ್ದಾರೆ ಎಂದು ಹೇಳಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶುಭಹಾರೈಸಿದರು.
ವೇದಿಕೆಯಲ್ಲಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತೆ(ಮನವಿಗಳು) ಸುಲಕ್ಷಣ ಎಸ್.ಎನ್., ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ(ಜಾರಿ) ಲಕ್ಷಾಪತಿ ನಾರಾಯಣ ನಾಯ್ಕ್, ಹಿರಿಯ ಉಪ ಆಯುಕ್ತ ಬಾಲಚಂದ್ರ, ಉಪ ಆಯುಕ್ತ ಬೆಳ್ಳಿಯಪ್ಪ, ಕ.ಸಾ.ಪ. ದ.ಕ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಉಪಸ್ಥಿತರಿದ್ದರು.
ದತ್ತಾಂಶ ನಮೂದು ಸಹಾಯಕಿ ಚಂಚಲ ಪ್ರಾರ್ಥನೆ ಹಾಡಿದರು. ಮಂಗಳೂರು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಆಡಳಿತ) ವಿ. ಕುಮಾರ್ ಸ್ವಾಗತಿಸಿ, ವಾಣಿಜ್ಯ ತೆರಿಗೆ ಅಧಿಕಾರಿ ಮಂಜುನಾಥ್ ವಂದಿಸಿದರು. ಉಪ ಆಯಕ್ತೆ ಹೇಮಲತಾ ಎನ್. ಕಾರ್ಯಕ್ರಮ ನಿರ್ವಹಿಸಿದರು.