
ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಸುಬ್ರಮಣ್ಯ: ಮನೆಯ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣ ಕಳವುಗೈದಿರುವ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರುವಿನಲ್ಲಿ ನಡೆದಿದೆ.
ಕೊಲ್ಲಮೊಗ್ರುವಿನ ಚಾಂತಾಳ ಸುರೇಶ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿರುವುದು. ಸುರೇಶ್ ಅವರು ಕೊಲ್ಲಮೊಗ್ರುವಿನಲ್ಲಿ ಸೆಲೂನ್ ಹೊಂದಿದ್ದು, ಅವರ ಪತ್ನಿ ಮೀನಾಕ್ಷಿ ಅವರು ಕೊಲ್ಲಮೊಗ್ರುವಿನಲ್ಲಿ ದಿನಸಿ ಅಂಗಡಿ ಹೊಂದಿದ್ದು, ಶುಕ್ರವಾರ ಮನೆಯಲ್ಲಿದ್ದ ಪುತ್ರ ಸಂಜೆ ಮನೆಗೆ ಬೀಗ ಹಾಕಿ ತಾಯಿಯ ಅಂಗಡಿಗೆ ಬಂದಿದ್ದರು. ರಾತ್ರಿ 8 ರ ವೇಳೆಗೆ ಮನೆ ಮಂದಿ ಮನೆಗೆ ತೆರಳಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಮನೆಯ ಬೆಡ್‌ರೂಂನ ಕಪಾಟಿನಲ್ಲಿಟ್ಟಿದ್ದ ಕಿವಿಯೋಲೆ, ಮೂಗುತಿ, ಬ್ರಾಸ್‌ಲೈಟ್ ಒಟ್ಟು ಅಂದಾಜು ೨೫ ಗ್ರಾಂನ ಅಂದಾಜು ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿದೆ.
ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ. ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಎಸೈ ಕಾರ್ತಿಕ್, ಬೆರಳಚ್ಚು ತಂಡ, ಶ್ವಾನದಳ, ಅಪರಾಧ ಪತ್ತೆ ದಳ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಮುಂದುವರಿಸಿದ್ದಾರೆ.