
ಕುಪ್ಪೆಪದವು ನಿವೇಶನ ವಂಚಿತರ ಹಗಲು ರಾತ್ರಿ ಧರಣಿ 9ನೇ ದಿನಕ್ಕೆ
Saturday, June 7, 2025
ಮಂಗಳೂರು: ಶಾಸಕ ಭರತ್ ಶೆಟ್ಟಿ ಅವರು 97 ಕುಟುಂಬಗಳಿಗೆ 7 ವರ್ಷಗಳ ಹಿಂದೆ ಹಕ್ಕು ಪತ್ರ ವಿತರಿಸಿ, ಈವರೆಗೂ ನಿವೇಶನ ಸ್ವಾಧೀನ ನೀಡದೆ ವಂಚಿಸಿರುವುದರ ವಿರುದ್ಧ ಗ್ರಾಮದ ನಿವೇಶನ ರಹಿತರು ನಡೆಸುತ್ತಿರುವ ಹಗಲು ರಾತ್ರಿ ಧರಣಿ 9ನೇ ದಿನಕ್ಕೆ ಪ್ರವೇಶಿಸಿದೆ.
ಧರಣಿ ನಿರತರಲ್ಲಿ ಬಹುತೇಕರು ಬೀಡಿ ಕಾರ್ಮಿಕರು. ಧರಣಿ ದೀರ್ಘಗೊಳ್ಳುತ್ತಿರುವುದರಿಂದ ಅವರ ಆದಾಯವಾದ ಬೀಡಿ ಕಟ್ಟುವ ದುಡಿಮೆಗೂ ಕಡಿವಾಣ ಬಿದ್ದಿತ್ತು. ಬೀಡಿ ಕಟ್ಟದಿದ್ದರೆ ಬದುಕಿನ ಬಂಡಿ ಸಾಗುವುದಿಲ್ಲ, ಧರಣಿ ನಿಲ್ಲಿಸಿದರೆ ನಿವೇಶನ ದೊರಕುವುದಿಲ್ಲ.
ಇದಕ್ಕೆ ಪರಿಹಾರವಾಗಿ ಇಂದು ಧರಣಿ ನಿರತ ಮಹಿಳೆಯರು ಬೀಡಿ ಕಟ್ಟುವ ದುಡಿಮೆಯ ಪರಿಕರವಾದ ಸೂಪು, ಎಲೆ, ಸೊಪ್ಪು, ಕತ್ತರಿ, ಅಚ್ಚು, ನೂಲಿನ ಸಮೇತ ಧರಣಿ ಮಂಟಪಕ್ಕೆ ಆಗಮಿಸಿದ್ದಾರೆ. ಅಲ್ಲೆ ತಂಡವಾಗಿ ಬೀಡಿ ಸುತ್ತುತ್ತಿದ್ದಾರೆ. ಇದು ಗ್ರಾಮದ ಜನರ ಗಮನ ಸೆಳೆದಿದೆ. ಆ ಮೂಲಕ ಹೋರಾಟಕ್ಕೆ ಹೊಸ ಶಕ್ತಿ ನೀಡಿದ್ದಾರೆ. ಇನ್ನೇನು ನಾಲ್ಕು ದಿನ, ಆ ಮೇಲೆ ಎದ್ದು ಹೋಗುತ್ತಾರೆ ಎಂದು ಮಾತನಾಡುತ್ತಿದ್ದ ಊರಿನ ಮರಿ ರಾಜಕಾರಣಿಗಳ ತಲೆ ನೋವು ಜಾಸ್ತಿ ಮಾಡಿದ್ದಾರೆ.