
ಎಲ್ಲಾ ಸಚಿವರುಗಳಿಗೆ ಮನವಿ ನೀಡಿದರೂ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ: ಶಾಸಕಿ ಭಾಗೀರಥಿ ಮುರುಳ್ಯ
ಸುಳ್ಯ: ಅಂಬೇಡ್ಕರ್ ಭವನ ಸೇರಿದಂತೆ ಸುಳ್ಯ ವಿಧಾನ ಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುದಾನಕ್ಕೆ ಬೇಡಿಕೆ ಇರಿಸಿ ಎಲ್ಲಾ ಸಚಿವರುಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಸರಕಾರದಿಂದ ಯಾವುದೇ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜೂ.13ರಂದು ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯ ವಹಿಸಿ ಅವರು ಮಾತನಾಡಿದರು. ರಸ್ತೆಗಳ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ವತಿಯಿಂದ 10 ಕೋಟಿ ರೂಗಳ ಪ್ರಸ್ತಾವನೆ ಕೇಳಿದ್ದು ಬಿಟ್ಟರೆ ಇತರ ಅನುದಾನಗಳು ಬಂದಿಲ್ಲ.
ಕೆಎಸ್‌ಆರ್‌ಟಿಸಿ, ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳಿಗೆ ಸಿಬ್ಬಂದಿ ನೇಮಕ ಬೇಡಿಕೆಯೂ ಈಡೇರಿಲ್ಲ ಎಂದು ಶಾಸಕರು ಹೇಳಿದರು.
ಸುಳ್ಯ ನಗರದಲ್ಲಿ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಸೇರಿ ಸುಳ್ಯ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿರುವ ಸಂದರ್ಭದಲ್ಲಿ ನಗರ ಪಂಚಾಯತ್‌ನ ಆಡಳಿತ, ವಿಪಕ್ಷ ಸದಸ್ಯರು, ಅಧಿಕಾರಿಗಳು ಪ್ರವಾಸ ಕೈಗೊಂಡಿರುವುದು ಸರಿಯಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆಡಿಪಿ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ತೀರ್ಥರಾಮ ಜಾಲ್ಸೂರು, ಆಶ್ರಫ್ ಗುಂಡಿ, ಪರಮೇಶ್ವರ ಕೆಂಬಾರೆ ಆಕ್ಷೇಪ ವ್ಯಕ್ತಪಡಿಸಿದರು. ನಗರದಲ್ಲಿ ಅಮೃತ್ ಕುಡಿಯುವ ನೀರಿನ ಯೋಜನೆಗೆ ರಸ್ತೆ ಬದಿ ಕಡಿದು ಹಾಕಿ ಸರಿಪಡಿಸದ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಲಾಯಿತು. ಅವರು ಘನ ತ್ಯಾಜ್ಯ ಘಟಕದ ಅಧ್ಯಯನಕ್ಕಾಗಿ ಅನುಮತಿ ಪಡೆದು ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ, ಎಲ್ಲಾ ಇಲಾಖೆ, ಜನಪ್ರತಿನಿಧಿಗಳು ಈ ರೀತಿ ಅಧ್ಯಯನ ಪ್ರವಾಸ ಕೈಗೊಳ್ಳುತ್ತಾರೆ ಆ ಬಗ್ಗೆ ಇಲ್ಲಿ ಚರ್ಚೆ ಬೇಡ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.ಈ ಸಂದರ್ಭದಲ್ಲಿ ಶಾಸಕರು ಮತ್ತು ಕೆಡಿಪಿ ಸದಸ್ಯರು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರ ಮಧ್ಯೆ ಕೆಲ ಹೊತ್ತು ವಾಗ್ವಾದ ನಡೆಯಿತು.
ಸುಳ್ಯ ತಾಲೂಕಿನಲ್ಲಿ ಅಡಿಕೆ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗದ ಬಗ್ಗೆ ಅಧ್ಯಯನ ನಡೆಸಲು ವಿಜ್ಞಾನಿಗಳ ಹಾಗೂ ಅಧಿಕಾರಿಗಳ ತಂಡ ರಚಿಸಿ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಈ ಕುರಿತ ಪ್ರಶ್ನೆಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಉತ್ತರಿಸಿದರು.
ಕೊಲ್ಲಮೊಗ್ರ ಗ್ರಾಮದ ಪನ್ನೆ ಎಂಬಲ್ಲಿ ನೆರೆ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಿ ಹಕ್ಕು ಪತ್ರ ವಿತರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಸೂಚಿಸಿದರು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಹಶೀಲ್ದಾರ್ ಮಂಜುಳಾ.ಎಂ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.