
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ಲೋಕಾರ್ಪಣೆ
ಸುಳ್ಯ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಚಾರಿ ಆರೋಗ್ಯ ಕ್ಲಿನಿಕ್ ಲೋಕಾರ್ಪಣೆ ಕಾರ್ಯಕ್ರಮ ತಾಲೂಕು ಪಂಚಾಯತ್ ಮುಂಭಾಗದಲ್ಲಿ ನಡೆಯಿತು. ಸಂಚಾರಿ ವಾಹನದ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿ ಶುಭ ಹಾರೈಸಿದರು.
ಈ ವಾಹನವು ಸುಳ್ಯ, ಪುತ್ತೂರು, ಕಡಬ ತಾಲೂಕು ಕೇಂದ್ರಗಳಲ್ಲಿ ಸಂಚರಿಸಲಿದೆ. ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ನಿರ್ಮಾಣ ಕಾರ್ಮಿಕರು ಮತ್ತು ಅವಲಂಬಿತರಿಗೆ ಆರೋಗ್ಯ ಸೌಲಭ್ಯ ದೊರೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿ ನಿರ್ದೇಶಕ ಕೆ.ಪಿ ಜಾನಿ, ಹಿರಿಯ ಕಾರ್ಮಿಕ ನಿರ್ದೇಶಕ ಗಣಪತಿ ಹೆಗಡೆ, ಜಿಲ್ಲಾ ಕಾರ್ಮಿಕ ಅಧಿಕಾರಿ ವಿಲ್ಮಾ, ಎಕ್ಸಿಕ್ಯುಟಿವ್ ರಮೇಶ್, ಗುತ್ತಿಗೆ ಸಂಸ್ಥೆ ಸಿಬ್ಬಂದಿ ನಿಖಿಲ್, ನ.ಪಂ. ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ, ಸೂಡ ಅಧ್ಯಕ್ಷ ಮುಸ್ತಫ ಕೆ.ಎಂ., ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ತಹಶೀಲ್ದಾರ್ ಮಂಜುಳಾ ಎಂ., ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ರಾಜಣ್ಣ, ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಅಶ್ರಫ್, ತೀರ್ಥರಾಮ ಜಾಲ್ಸೂರು, ಪರಮೇಶ್ವರ ಕೆಂಬಾರೆ, ಕೃಷಿ ನಿರ್ದೇಶಕ ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್:
ಎಲ್ಲಾ ವೈದ್ಯಕೀಯ ಉಪಕರಣಗಳು ಅಳವಡಿಸಲು ಸಾಧ್ಯವಾಗುವಂತಹಾ ವಿಶಾಲವಾದ ವಾಹನವಾಗಿದ್ದು, ಕಾರ್ಮಿಕರಿಗೆ ಎಲ್ಲಾ ರೀತಿಯ ಆಧುನಿಕ ವೈದ್ಯಕೀಯ ಪರೀಕ್ಷೆಗಳನ್ನು ನಿಖರವಾಗಿ ನೀಡುವಂತಹ ವೈದ್ಯಕೀಯ ಉಪಕರಣಗಳು, ತಜ್ಞ ವೈದ್ಯರು ಸೇರಿದ ತಂಡ ಇರಲಿದೆ. ಈ ವಾಹನದಲ್ಲಿ ಆಸ್ಪತ್ರೆ ಮಾದರಿಯಲ್ಲಿ ಸಕಲ ಸೌಲಭ್ಯಗಳನ್ನು ಹೊಂದಿರಲಿದೆ.
ಸುಳ್ಯದಲ್ಲಿ ಉದ್ಘಾಟನೆಗೊಂಡ ವಾಹನವು ಸುಳ್ಯ, ಪುತ್ತೂರು ಕಡಬ ತಾಲೂಕಿನಲ್ಲಿ ಸಂಚರಿಸಲಿದ್ದು ಪ್ರತಿ ತಾಲೂಕಿನಲ್ಲಿ ಎರಡು ದಿನಗಳು ಸಂಚರಿಸಲಿದೆ. ಸುಳ್ಯ, ಕಡಬ, ಹಾಗೂ ಪುತ್ತೂರು ತಾಲೂಕಿನಲ್ಲಿ ನೋಂದಾಯಿತ ಕಾರ್ಮಿಕರಿದ್ದು, ಇದರ ಸದುಪಯೋಗಗಳನ್ನು ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಲಭ್ಯವಾಗಲಿದೆ ಎಂದು ಹಿರಿಯ ಕಾರ್ಮಿಕ ನಿರ್ದೇಶಕ ಗಣಪತಿ ಹೆಗಡೆ ತಿಳಿಸಿದರು.