
ಸರಕಾರಿ ಆಸ್ಪತ್ರೆಯ ಡಿಗ್ರೂಪ್ ನೌಕರರ ಮುಷ್ಕರ: ಸಾರ್ವಜನಿಕ ಆಸ್ಪತ್ರೆಯ ದೈನಂದಿನ ಕೆಲಸ ಕಾರ್ಯಗಳಿಗೆ ತೊಡಕು
ಸುಳ್ಯ: ಮೂರು ತಿಂಗಳಿನಿಂದ ಸಂಬಳ ದೊರೆಯದ ಹಿನ್ನಲೆಯಲ್ಲಿ ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಡಿಗ್ರೂಪ್ ನೌಕರರು ಕೆಲಸಕ್ಕೆ ಗೈರು ಹಾಜರಾಗಿ ಮುಷ್ಕರ ನಡೆಸುತ್ತಿದ್ದಾರೆ. ಮೂರು ದಿನಗಳಿಂದ ನಡೆಯುತ್ತಿರುವ ಮುಷ್ಕರದಿಂದ ಸುಳ್ಯ ಸರಕಾರಿ ಆಸ್ಪತ್ರೆಯ ದೈನಂದಿನ ಕೆಲಸ ಕಾರ್ಯಗಳಿಗೆ ತೊಡಕುಂಟಾಗಿದೆ.
ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಮಂದಿ ಡಿಗ್ರೂಪ್ ನೌಕರರಿಗೆ ಮಾರ್ಚ್, ಎಪ್ರಿಲ್, ಮೇ ತಿಂಗಳ ಸಂಬಳ ಬಂದಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಏಜೆನ್ಸಿಗಳು ಸಂಬಳ ಪಾವತಿ ಮಾಡುತ್ತದೆ. ಏಜೆನ್ಸಿಗಳಿಗೆ ಸರಕಾರದಿಂದ ಹಣ ಪಾವತಿಸಲಾಗುತ್ತದೆ. ಸರಕಾರದಿಂದ ಏಜೆನ್ಸಿಗೆ ಹಣ ಪಾವತಿಯಾಗಲು ವಿಳಂಬ ಆಗಿರುವ ಕಾರಣ ನೌಕರರಿಗೆ ಸಂಬಳ ಆಗಿಲ್ಲ ಎಂದು ಹೇಳಲಾಗಿದೆ.
ಡಿಗ್ರೂಪ್ ನೌಕರರ ಮುಷ್ಕರದಿಂದ ಆಸ್ಪತ್ರೆಯ ಸ್ವಚ್ಚತೆ, ತುರ್ತು ಚಿಕಿತ್ಸೆ, ರೋಗಿಗಳಿಗೆ ಅಡುಗೆ ತಯಾರಿ, ರೋಗಿಗಳನ್ನು ಆಸ್ಪತ್ರೆಯ ವಾರ್ಡ್, ಆಪರೇಷನ್ ಥಿಯೇಟರ್ ಮತ್ತಿತರ ಕಡೆಗಳಿಗೆ ಕರೆದೊಯ್ಯುವುದು, ಪೋಸ್ಟ್‌ಮಾರ್ಟಮ್ ಮತ್ತಿತರ ದೈನಂದಿದ ಕೆಲಸಗಳಿಗೆ ತೊಡಕು ಉಂಟಾಗಿದೆ ಎನ್ನುತ್ತಾರೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಕರುಣಾಕರ ಕೆ.ವಿ.
ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 32 ಡಿಗ್ರೂಪ್ ನೌಕರರ ಹುದ್ದೆ ಮಂಜೂರಾಗಿದೆ. ಆದರೆ ಸರಕಾರದಿಂದ ನೇಮಕಾತಿ ಆದವರು ಸದ್ಯ ಯಾರೂ ಇಲ್ಲ. ಕಳೆದ 15-20 ವರ್ಷಗಳಿಂದ ಸರಕಾರದಿಂದ ಡಿಗ್ರೂಪ್ ನೌಕರರ ನೇಮಕಾತಿ ನಡೆದಿಲ್ಲ. ಹೊರಗುತ್ತಿಗೆ ಆಧಾರದಲ್ಲಿಯೇ ಡಿಗ್ರೂಪ್ ನೌಕರರ ನೇಮಕಾತಿ ನಡೆದಿದೆ. ಸದ್ಯ 6 ಪುರುಷರು ಹಾಗೂ 14 ಮಂದಿ ಮಹಿಳೆಯರು ಸೇರಿ 20 ಮಂದಿ ನೌಕರರು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಂಬುಲೆನ್ಸ್ ಚಾಲಕರಿಂದ ಸೇವೆ:
ಡಿಗ್ರೂಪ್ ನೌಕರರು ಮುಷ್ಕರ ಹೂಡಿರುವ ಹಿನ್ನಲೆಯಲ್ಲಿ ಆಸ್ಪತ್ರೆಯ ದೈನಂದಿನ ಕೆಲಸ ಕಾರ್ಯಗಳು ತಾಳ ತಪ್ಪಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಸುಳ್ಯ ತಾಲೂಕು ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ಸದಸ್ಯರು ಆಸ್ಪತ್ರೆಯಲ್ಲಿ ಡಿಗ್ರೂಪ್ ನೌಕರರ ಸೇವೆಯನ್ನು ನಡೆಸಲು ಮುಂದಾಗಿದ್ದಾರೆ. ಭಾನುವಾರ ಮಧ್ಯಾಹ್ನದಿಂದ ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಸಂಘದ ಸದಸ್ಯರು ಉಚಿತ ಸೇವೆ ಸಲ್ಲಿಸುತ್ತಿದ್ದಾರೆ.
ಆಸ್ಪತ್ರೆಯ ಸ್ವಚ್ಚತೆ, ತುರ್ತು ಚಿಕಿತ್ಸೆ, ರೋಗಿಗಳನ್ನು ಆಸ್ಪತ್ರೆಯ ವಾರ್ಡ್‌ಗೆ ಕರೆದೊಯ್ಯುವುದು ಮತ್ತಿತರ ಕೆಲಸಗಳಿಗೆ ನೆರವು ನೀಡುತ್ತಿದ್ದಾರೆ. ಡಿಗ್ರೂಪ್ ನೌಕರರಿಗೆ ಕೂಡಲೇ ಸಂಬಳ ಪಾವತಿ ಮಾಡುವ ವ್ಯವಸ್ಥೆ ಆಗಬೇಕು. ಅವರ ಮುಷ್ಕರ ಮುಗಿಯುವ ತನಕ ಸೇವೆ ಸಲ್ಲಿಸುತ್ತೇವೆ, ಪೋಸ್ಟ್‌ಮಾರ್ಟಂ ಸೇರಿದಂತೆ ಎಲ್ಲಾ ಕೆಲಸ ಕಾರ್ಯಗಳನ್ನು ನಡೆಸಲು ಸಿದ್ಧ ಎಂದು ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ಸದಸ್ಯರು ತಿಳಿಸಿದ್ದಾರೆ. ಸಂಘದ ಗೌರವಾಧ್ಯಕ್ಷ ಶಿವಪ್ರಸಾದ್, ಅಧ್ಯಕ್ಷ ಶರತ್, ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಗೂನಡ್ಕ, ಪ್ರಮುಖರಾದ ತಾಜುದ್ದೀನ್ ಟರ್ಲಿ, ರಫೀಕ್, ಸೀತಾರಾಮ, ಕೇಶವಚಂದ್ರ, ಪೃಥ್ವಿರಾಜ್, ಬಾಲಸುಬ್ರಹ್ಮಣ್ಯ ಸೇರಿದಂತೆ ಸಂಘದ ಸದಸ್ಯರು ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ.