
ಕೋಮು ಸಂಘರ್ಷ ಪ್ರಚೋದನೆಯ ಹಳೆ ವೀಡಿಯೊ ಹಂಚಿದಾತನ ಸೆರೆ
Sunday, June 1, 2025
ಉಡುಪಿ: ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿ, ಹಳೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಕೋಟ ಪೊಲೀಸರು ಮೇ ೩೧ರಂದು ಶಂಕಿತನನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ.
ಆತನ ವಿರುದ್ಧ ಈಗಾಗಲೇ ಕೋಟ ಪೊಲೀಸ್ ಠಾಣೆಯಲ್ಲಿ ಜೋಡಿ ಕೊಲೆ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿವೆ. ಬಂಧನದ ನಂತರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ರಿಯಾಜ್ ಫರಂಗಿಪೇಟೆ ಎಂಬ ವ್ಯಕ್ತಿಯ ಹಳೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ರಾಘವೇಂದ್ರ ಪೋಸ್ಟ್ ಮಾಡಿದ್ದ. ಅದಕ್ಕೆ ಸಂಬಂಧಿಸಿದ ಪ್ರಕರಣ ಈಗಾಗಲೇ ೨೦೨೧ರಲ್ಲಿ ಮಂಗಳೂರು ಕೇಂದ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ವೀಡಿಯೊ ಸ್ಥಳೀಯ ಹಿಂದೂ ಯುವಕರನ್ನು ಕೋಮು ಸಂಘರ್ಷ ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತದೆ ಎಂದು ಕೋಟ ಪೊಲೀಸರು ಬಂಧಿಸಿ, ಕೇಸು ದಾಖಲಿಸಿದ್ದಾರೆ.