
ಕೋಮು ಸಂಘರ್ಷ ನಿಗ್ರಹ ವಿಶೇಷ ಕಾರ್ಯಪಡೆಗೆ ವಿರೋಧ
ಉಡುಪಿ: ಕರಾವಳಿಯಲ್ಲಿ ಕೋಮು ಸಂಘರ್ಷ ನಿಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸದಾಗಿ ರಚಿಸಿರುವ ವಿಶೇಷ ಕಾರ್ಯಪಡೆ ವ್ಯಾಪ್ತಿಗೆ ಉಡುಪಿ ಜಿಲ್ಲೆಯನ್ನು ಸೇರ್ಪಡೆಗೊಳಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ, ಉಡುಪಿ ಜಿಲ್ಲೆಯ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದು, ಈ ಕಾರ್ಯಪಡೆಯ ಮೂಲಕ ಉಡುಪಿ ಜಿಲ್ಲೆಯನ್ನು ಕೋಮು ಸೂಕ್ಷ್ಮ ಪ್ರದೇಶ ಎಂದು ಬಿಂಬಿಸಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಕಿಡಿ ಕಾರಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯನ್ನು ಈ ಕಾರ್ಯಪಡೆ ವ್ಯಾಪ್ತಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಕಳೆದ ಹಲವು ದಶಕಗಳಿಂದ ಯಾವುದೇ ಕೋಮು ಸಂಘರ್ಷದ ಘಟನೆಗಳು ಉಡುಪಿ ಜಿಲ್ಲೆಯಲ್ಲಿ ವರದಿಯಾಗದಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ, ಸಲಹೆ ಪಡೆಯದೆ ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ಯಾವುದೇ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ಈ ಕಾರ್ಯಪಡೆಯನ್ನು ಉಡುಪಿ ಜಿಲ್ಲೆಯ ಜನತೆಯ ಮೇಲೆ ಹೇರಿದೆ.
ರಾಜ್ಯ ಗೃಹ ಇಲಾಖೆಯ ವೈಫಲ್ಯವನ್ನು ಸರಕಾರವೇ ಈ ನಿರ್ಧಾರದಿಂದ ಒಪ್ಪಿಕೊಂಡಿದ್ದು, ರಾಜ್ಯದ ೩೧ ಜಿಲ್ಲೆಗಳ ಪೈಕಿ ಕೇವಲ ಮೂರು ಜಿಲ್ಲೆಗಳನ್ನು ಕೋಮು ಸೂಕ್ಷ್ಮತೆಯ ನೆಪವೊಡ್ಡಿ ಈ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಪರೋಕ್ಷವಾಗಿ ರಾಷ್ಟ್ರಕ್ಕೆ ಸಂದೇಶ ನೀಡಿದಂತಾಗಿದೆ.
ನೆರೆಯ ಜಿಲ್ಲೆಗಳಲ್ಲಿ ಕೋಮು ಸಂಘರ್ಷದ ಘಟನೆಗಳು ನಡೆದಾಗಲೂ ಉಡುಪಿಯಲ್ಲಿ ಶಾಂತಿಯುತವಾಗಿದ್ದು ತಮ್ಮ ಶಿಸ್ತು, ಸಂಯಮ, ಕಾನೂನು ಪಾಲನೆ ಹಾಗೂ ರಾಷ್ಟೀಯ ವಾದಿ ಚಿಂತನೆ ಮೂಲಕ ಕಾನೂನು ಸುವ್ಯವಸ್ಥೆಗೆ ಸದಾ ಸಹಕಾರ ನೀಡುವ ಜಿಲ್ಲೆಯ ಜನತೆಗೆ ರಾಜ್ಯ ಸರಕಾರ ಈ ಕಾರ್ಯಪಡೆಯನ್ನು ಹೇರುವುದು ಸರಿಯಲ್ಲ. ವಿಶೇಷ ಕಾರ್ಯಪಡೆ ಮೂಲಕ ಅತ್ಯಂತ ಶಾಂತಿಯುತವಾಗಿರುವ ಉಡುಪಿ ಜಿಲ್ಲೆಯನ್ನು ಕೋಮು ಹಿಂಸೆ ಪೀಡಿತ ಜಿಲ್ಲೆ ಎಂಬಂತೆ ರಾಷ್ಟ್ರ ಮಟ್ಟದಲ್ಲಿ ಬಿಂಬಿಸಲು ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸುತ್ತಿದೆ.
ರಾಜ್ಯ ವಿಶೇಷ ಕಾರ್ಯಪಡೆಯ ವ್ಯಾಪ್ತಿಯಿಂದ ಉಡುಪಿ ಜಿಲ್ಲೆಯನ್ನು ತಕ್ಷಣ ಕೈಬಿಡಬೇಕು ಹಾಗೂ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಅಭಿವೃದ್ದಿ ದೃಷ್ಟಿಯಿಂದ ವಿಶೇಷ ಕಾರ್ಯಪಡೆಯ ಔಚಿತ್ಯವನ್ನು ಪುನರ್ ವಿಮರ್ಶೆ ಮಾಡಿ ರದ್ದು ಮಾಡಬೇಕು.
ಉಡುಪಿಯ ಪ್ರಜ್ಞಾವಂತ ನಾಗರಿಕರೂ ಜಿಲ್ಲೆಯ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಒಕ್ಕೊರಲಿನಿಂದ ವಿರೋಧಿಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಸಂದರ್ಭ ಬರಲಿದೆ ಎಂದು ಯಶಪಾಲ್ ತಿಳಿಸಿದ್ದಾರೆ.