
ನಾಳೆ ಆಟಿ ಅಮಾವಾಸ್ಯೆ: ಕಷಾಯ ಕುಡಿಯುವ ದಿನ ಬಂತು
ತುಳುನಾಡಿನಲ್ಲಿ ಆಟಿ ತಿಂಗಳು ಎಂದರೆ ಹೆಚ್ಚಿನವರಿಗೆ ಮೊದಲು ನೆನಪಾಗುವುದು ಹಾಲೆ ಮರದ ಕಷಾಯವೆ. ಯಾಕೆಂದರೆ, ಬೇರೆ ಏನೇ ಆಚರಣೆಗಳು ಇಲ್ಲದೆ ಹೋದರೂ ಆಟಿ ಅಮವಾಸ್ಯೆ ದಿನ ಕಷಾಯ ಕುಡಿಯುವುದು ಎಲ್ಲರ ಮನೆಯಲ್ಲೂ ಕಡ್ಡಾಯವೇ ಆಗಿತ್ತು. ಆ ದಿನ ಬೆಳಗ್ಗೆ ಪಾಲೆ (ಹಾಲೆ, ಸಪ್ತಪರ್ಣಿ, ಏಳೆಲಗ) ಮರದ ತೊಗಟೆಯಿಂದ ಮಾಡಿದ ಕಷಾಯ ಸೇವನೆಯದ್ದೇ ಒಂದು ದೊಡ್ಡ ಸಂಗತಿ!
ಜುಲೈ 24ರಂದು ಆಟಿ ಅಮಾವಾಸ್ಯೆ ಇದ್ದು, ಈಗಲೂ ಕಷಾಯ ಕುಡಿಯುವ ಪರಂಪರೆ ಹೆಚ್ಚಿನ ಕಡೆ ಮುಂದುವರಿದಿದೆ. ಈಗ ಹಲವು ಸಂಘ ಸಂಸ್ಥೆಗಳು, ಆಯುರ್ವೇದ ಆಸ್ಪತ್ರೆಗಳು ಆಟಿ ಕಷಾಯ ಸಿದ್ಧಪಡಿಸುವುದೂ ಇದೆ. ಮಳೆಗಾಲದ ಸಂದರ್ಭದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಇದೊಂದು ಅನುಕೂಲಕರ ಎಂಬ ಪುರಾತನ ನಂಬಿಕೆಯನ್ನು ಆಧುನಿಕರು ಕೂಡ ಅನುಮೋದಿಸುತ್ತಾರೆ.
ಸುಮಾರು ಮೂರು ದಶಕಗಳ ಹಿಂದೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಹೋಗಿ ಹಾಲೆ ಮರದ ತೊಗಟೆಯನ್ನು ತರುವುದು ಕ್ರಮವಾಗಿತ್ತು. ಅದು ಕೂಡ ಮೈಮೇಲೆ ಒಂದು ತುಂಡು ಬಟ್ಟೆ ಇಲ್ಲದೆ ಕೆತ್ತೆ ತೆಗೆಯಬೇಕು ಎಂಬ ನಂಬಿಕೆ ಇತ್ತು. ಕೆತ್ತೆ ತೆಗೆಯಲು ಕತ್ತಿ ಉಪಯೋಗಿಸುವಂತಿಲ್ಲ. ಚೂಪಾದ ಬೊಳ್ಳು ಕಲ್ಲಿನಿಂದ (ಬೊಳ್ಳುಕಲ್ಲು) ಮರದ ಮೇಲೆ ಗೀರು ಹಾಕಿ, ಕಲ್ಲಿನಿಂದಲೇ ಗುದ್ದಿ ಕೆತ್ತೆ ತೆಗೆಯಲಾಗುತ್ತಿತ್ತು. ಸೂರ್ಯನ ಬೆಳಕು ಬಿದ್ದ ಬಳಿಕ ತೆಗೆದರೆ ರಸ ಗುಣ ಕಡಿಮೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಈಗ ರಾತ್ರಿಯೇ ಹೋಗಿ ಕೆತ್ತೆ ತರುವುದು ಕಡಿಮೆಯಾಗಿದೆ.
ಕಷಾಯ ತಯಾರಿಸುವುದು ಹೇಗೆ?
ತೊಗಟೆಯನ್ನು ಮನೆಗೆ ತಂದ ಬಳಿಕ ತೊಳೆದು, ಅದರ ಹೊರಗಿನ ಸಿಪ್ಪೆಯನ್ನು ಮತ್ತು ಒಳ ಭಾಗದ ಪದರವನ್ನು ತೆಗೆಯಬೇಕು. ಇದರಿಂದ ಅದರ ಹಾಲು ತೆಗೆಯುವುದು ಸುಲಭವಾಗುತ್ತದೆ. ಇನ್ನು ಕಲ್ಲಿನಲ್ಲಿ ಗುದ್ದಿಯೇ ರಸವನ್ನು ತೆಗೆಯುವುದು ಉತ್ತಮ. ಬಳಿಕ ಅದಕ್ಕೆ ಓಮ ಕಾಳು, ಕರಿಮೆಣಸು ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ ಜಜ್ಜಬೇಕು. 1:4 ನಾಲ್ಕು ಪ್ರಮಾಣದಲ್ಲಿ ಅಂದರೆ, ಓಮದ ಕಾಳು, ಕರಿಮೆಣಸು ಮತ್ತು ಬೆಳ್ಳುಳ್ಳಿಯನ್ನು ಒಂದು ಪ್ರಮಾಣದಲ್ಲಿ ತೆಗೆದುಕೊಂಡರೆ ಅದರ ನಾಲ್ಕು ಪಟ್ಟಿನಷ್ಟು ಕೆತ್ತೆಯ ಹಾಲನ್ನು ಹಾಕಿ ಆರೆಯಬೇಕು. ಬಳಿಕ ಅಷ್ಟೇ ಪ್ರಮಾಣದಲ್ಲಿ ನೀರು ಸೇರಿಸಬೇಕು. ಇದು ಆಯುರ್ವೇದ ಕಷಾಯ ಕಲ್ಪನಾ ಪ್ರಮಾಣವಾಗಿದೆ.
ಬೊಳ್ಳು ಕಲ್ಲಿನ ಒಗ್ಗರಣೆ:
ಕಷಾಯ ತೆಗೆದ ಬಳಿಕ ಬೊಳ್ಳು ಕಲ್ಲನ್ನು ಕೆಂಪು ಬಣ್ಣಕ್ಕೆ ತಿರುಗುವ ವರೆಗೆ ಬಿಸಿ ಮಾಡಿ, ಅದನ್ನು ಒಗ್ಗರಣೆ ರೀತಿಯಲ್ಲಿ ಕಷಾಯದ ಪಾತ್ರೆಗೆ ಹಾಕಬೇಕು. ಇದರಿಂದ ಮಾತ್ರವೇ ಪಾಲೆಯ ರಸಕ್ಕೆ ಕಷಾಯದ ಗುಣ ಬರುತ್ತದೆ. ಒಗ್ಗರಣೆ ಹಾಕುವುದರಿಂದ ರಸದಲ್ಲಿರುವ ಹಸಿ ಗುಣ ದೂರವಾಗಿ, ಉಷ್ಣವೀರ್ಯ ಪ್ರಾಪ್ತಿಯಾಗುತ್ತದೆ.
ಎಷ್ಟು ಸೇವಿಸಬೇಕು?:
ಒಬ್ಬ ವ್ಯಕ್ತಿ 15 ಎಂ.ಎಲ್.ನಷ್ಟು ಕಷಾಯ ಸೇವಿಸುವುದು ಉತ್ತಮ. ಕಷಾಯ ಸೇವನೆಯ ಒಂದು ಗಂಟೆಯ ಅನಂತರ ಮೆಂತೆ ಗಂಜಿ ಸೇವಿಸಬೇಕು.
ಆಟಿ ಕಷಾಯದ ಲಾಭಗಳೇನು?
ಮಳೆಗಾಲ ಆರಂಭವಾಗುತ್ತಿದ್ದಂತೆ ಎಲ್ಲೆಡೆ ತಂಪಾದ ವಾತಾವರಣದಿಂದಾಗಿ ದೇಹದಲ್ಲಿ ಶೀತ ಗುಣದ ತೊಂದರೆ ಉಂಟಾಗುತ್ತದೆ. ಈ ಸಮಯದಲ್ಲಿ ಪಾಲೆ ಕೆತ್ತೆಯ ಕಷಾಯ ಸೇವನೆ ದೇಹಕ್ಕೆ ಉಷ್ಣಗುಣವನ್ನು ಕೊಡುತ್ತದೆ ಮಾತ್ರವಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಜತೆಗೆ ಕೆಮ್ಮು, ಕಫದಂತಹ ಸಮಸ್ಯೆಗಳನ್ನೂ ದೂರ ಮಾಡುತ್ತದೆ.
*ಮಹಿಳೆಯರಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳ ನಿವಾರಣೆಗೂ ಸಹಕಾರಿ
*ಬಾಣಂತಿಯರಲ್ಲಿ ಹಾಲು ಹೆಚ್ಚಾಗಲು, ಶಿಶುಗಳಿಗೆ ಕಫ ಸಮಸ್ಯೆಗೂ ಮದ್ದು
*ಮಲೇರಿಯಾ ಸಹಿತ ಇತರ ಜ್ವರಕ್ಕೂ ಇದು ಉತ್ತಮ ಔಷಧವಂತೆ.
*ಹುಳಬಾಧೆಯಿಂದ ಮುಕ್ತಿ, ಜೀರ್ಣಾಂಗವ್ಯೂಹ ಶುದ್ಧಗೊಳಿಸುತ್ತದೆ.
*ಆಹಾರದ ಪಚನ ಕ್ರಿಯೆ ಉತ್ತಮಪಡಿಸುತ್ತದೆ.
ತೊಗಟೆ ಕೆತ್ತುವಾಗ ಮರ ನೋಡಿಕೊಳ್ಳಿ!:
ಪಾಲೆ ಮರ ಎಂದು ತಪ್ಪಾಗಿ ಕಾಸರಕನ ಮರದ ತೊಗಡೆಯ ರಸವನ್ನು ಸೇವಿಸಿ ದುರಂತಗಳು ಸಂಭವಿಸಿರುವ ಉದಾಹರಣೆಗಳು ನಮ್ಮ ಮುಂದಿದೆ. ಹಾಗಾಗಿ ಪಾಲೆ ಮರವನ್ನು ಹಿಂದಿನ ದಿನವೇ ಗುರುತು ಮಾಡಿ ಇಡುವುದು ಉತ್ತಮ. ಮರಕ್ಕೊಂದು ಬಿಳಿ ನೂಲನ್ನು ಕಟ್ಟಿ, ಮರದ ಬುಡದಲ್ಲಿ ಕಲ್ಲು ಇಟ್ಟು, ಪ್ರಾರ್ಥಿಸಿ ಬರುವ ಕ್ರಮವೂ ಇತ್ತು. ಇದು ಹಿರಿಯರು ಮರವನ್ನು ಗುರುತು ಹಾಕುತ್ತಿದ್ದ ಕ್ರಮವಾಗಿತ್ತು. ಇದೆಲ್ಲ ಕಷ್ಟ ಎಂದಾದರೆ ಬೆಳಗ್ಗೆ ಆದ ಮೇಲೆ ಹೋಗಿ ತರುವುದು ಉತ್ತಮ.