
ತುಂಬೆ-ಸಜೀಪ ನಡುವೆ ಸಂಪರ್ಕಕೊಂಡಿಯಾಗಲಿದೆ 7ನೇ ಸೇತುವೆ
ಬಂಟ್ವಾಳ: ನೇತ್ರಾವತಿ ನದಿಗೆ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 60 ಕೋ.ರೂ. ವೆಚ್ಚದಲ್ಲಿ 340 ಮೀಟರ್ ಉದ್ದದ ಮತ್ತೊಂದು 7ನೇ ಹೊಸ ಸೇತುವೆ ನಿರ್ಮಾಣಗೊಳ್ಳಲಿದ್ದು, ಲೋಕೋಪಯೋಗಿ ಇಲಾಖೆಯಿಂದ ಹಸಿರು ನಿಶಾನೆ ದೊರಕಿದೆ.
ಸ್ಪೀಕರ್ ಯು.ಟಿ. ಖಾದರ್ ಅವರ ಪ್ರಸ್ತಾವನೆಗೆ ಕಳೆದ ಡಿಸೆಂಬರ್‌ನಲ್ಲಿ ಸಚಿವ ಸಂಪುಟ ಈ ಸೇತುವೆ ನಿರ್ಮಾಣಕ್ಕೆ ಅಸ್ತು ಅಂದಿದ್ದು, ಈ ಕುರಿತಾಗಿ ರಾಜ್ಯಮಟ್ಟದ ತಾಂತ್ರಿಕ ಸಲಹಾ ಸಮಿತಿಯಿಂದಲು ಪರಿಶೀಲನೆ ನಡೆದಿದೆ. ವಿಸ್ತೃತವಾದ ಯೋಜನಾ ವರದಿಯ ತಾಂತ್ರಿಕ ಅನುಮೋದನೆ ಪಡೆದ ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ.
ಇದೀಗ ಲೋಕೋಪಯೋಗಿ ಇಲಾಖೆಯ ಮೂಲಕ 60 ಕೋ.ರೂ. ಅನುದಾನ ಮಂಜೂರಾಗಿ ನಬಾರ್ಡ್ ಆರ್‌ಐಡಿಎಫ್ 31ರಡಿ ಸೇತುವೆ ನಿರ್ಮಾಣವಾಗಲಿದೆ. ಸೇತುವೆ ನಿರ್ಮಾಣದ ಟೆಂಡರ್ ಪ್ರಕ್ರಿಯೆಗೆ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಸಿಆರ್‌ಝಡ್ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇಲಾಖೆಯು ಈಗಾಗಲೇ ಸ್ಥಳೀಯ ಮಣ್ಣು ಪರೀಕ್ಷೆಯನ್ನೂ ಪೂರ್ಣಗೊಳಿಸಿದೆ.
340 ಮೀಟರ್ ಉದ್ದ, 12 ಮೀಟರ್ ಅಗಲ:
ಒಟ್ಟು 340 ಮೀ. ಉದ್ದಕ್ಕೆ ಸೇತುವೆ ನಿರ್ಮಾಣವಾಗಲಿದ್ದು, 12 ಮೀ. ಅಗಲವನ್ನು ಹೊಂದಿರುತ್ತದೆ. ಮಧ್ಯೆ 8 ಮೀ. ಅಗಲದ ರಸ್ತೆ ನಿರ್ಮಾಣವಾಗಲಿದೆ. ಸೇತುವೆಯಲ್ಲಿ ಒಟ್ಟು 9 ಅಂಕಣಗಳಿದ್ದು, 8 ಅಂಕಣಗಳು 30 ಮೀ. ಅಂತರದಲ್ಲಿದ್ದು, 1 ಅಂಕಣ 70 ಮೀ. ಅಂತರಕ್ಕೆ ಬೌಸ್ಟಿಂಗ್ ಮಾದರಿಯಲ್ಲಿ ನಿರ್ಮಾಣಗೊಳ್ಳಲಿದೆ. 6 ಮೀ. ಎತ್ತರಕ್ಕೆ ಸ್ಲಾಬ್ ನಿರ್ಮಾಣವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸೇತುವೆಯ ಎರಡೂ ಬದಿ ಸಂಪರ್ಕ ರಸ್ತೆಗಳು, ಒಂದಷ್ಟು ಉದ್ದಕ್ಕೆ ತಡೆಗೋಡೆ ನಿರ್ಮಾಣವಾಗಲಿದೆ. ಈ ಸೇತುವೆಯು ತುಂಬೆ ಜಂಕ್ಷನ್ ಹಾಗೂ ಸಜೀಪ ಜಂಕ್ಷನ್ ಮೂಲಕ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಮುಡಿಪು-ಮೆಲ್ಕಾರ್ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸಲಿದೆ.
ಸಜೀಪಮಾಗಣೆಗೊಳಪಟ್ಟು ಸಜೀಪಮೂಡ, ಸಜೀಪಮುನ್ನೂರು, ಸಜೀಪನಡು, ಸಜೀಪಪಡು ಎನ್ನುವ ನಾಲ್ಕು ಗ್ರಾಮಗಳಿವೆ. ಈ ನಾಲ್ಕು ಗ್ರಾಮಗಳು ಬಂಟ್ವಾಳ ತಾಲೂಕು ವ್ಯಾಪ್ತಿಗೆ ಒಳಪಟ್ಟಿತ್ತು. ಉಳ್ಳಾಲ ಹೊಸ ತಾಲೂಕು ನಿರ್ಮಾಣಗೊಂಡ ಬಳಿಕ ಸಜೀಪನಡು ಮತ್ತು ಸಜೀಪಪಡು ಗ್ರಾಮಗಳು ಉಳ್ಳಾಲ ತಾಲೂಕು ವ್ಯಾಪ್ತಿಗೆ ಸೇರ್ಪಡೆಯಾಗಿವೆ. ಈ ನಾಲ್ಕು ಗ್ರಾಮಗಳು ಮಾತ್ರವಲ್ಲದೆ ಇದರ ಸುತ್ತಮುತ್ತಲಿನ ಚೇಳೂರು, ಬೋಳ್ಯಾರು, ಮತ್ತಿತರ ಭಾಗದ ಜನರಿಗೆ ಅನುಕೂಲವಾಗಲಿದ್ದರೆ ತುಂಬೆ, ಫರಂಗಿಪೇಟೆ, ಅರ್ಕುಳ, ಬ್ರಹ್ಮರಕೊಟ್ಲು ಭಾಗದ ಜನರಿಗೆ ನೇತ್ರಾವತಿ ಸನಿಹದಲ್ಲಿದ್ದರೂ ನೇತ್ರಾವತಿ ನದಿ ಈ ಊರುಗಳನ್ನು ಭೌಗೋಳಿಕವಾಗಿ ಪ್ರತ್ಯೇಕಿಸಿದೆ.
ಇದರಿಂದಾಗಿ ಈ ಊರಿನ ಜನರು ಜಿಲ್ಲಾ ಕೇಂದ್ರ ಮಂಗಳೂರು ಅಥವಾ ತುಂಬೆ, ಫರಂಗಿಪೇಟೆ, ಅಡ್ಯಾರು ಮತ್ತಿತರ ಪ್ರದೇಶಗಳಿಗೆ ಹೋಗಬೇಕಾದರೆ ಮೆಲ್ಕಾರ್, ಬಿ.ಸಿ.ರೋಡಿಗೆ ಹೋಗಿ ಸುತ್ತುಬಳಸಿ ಬರಬೇಕಾಗಿತ್ತು ಅಥವಾ ಮುಡಿಪು, ಕೊಣಾಜೆ ಮಾರ್ಗವಾಗಿ ಮಂಗಳೂರಿಗೆ ಹೋಗಬೇಕಿತ್ತು. ಇಲ್ಲೊಂದು ಸೇತುವೆ
ನಿರ್ಮಾಣವಾದರೆ ಸುತ್ತುಬಳಸಿ ಹೋಗುವ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವ ಬೇಡಿಕೆಯನ್ನು ಹಲವು ವರ್ಷಗಳ ಹಿಂದೆಯೇ ಈ ಭಾಗದ ಜನರು ಜನಪ್ರತಿನಿಧಿಗಳ ಮುಂದಿಟ್ಟಿದ್ದರು. ಆದರೆ ಅದು ಈಡೇರಿರಲಿಲ್ಲ.
ಈ ಹಿಂದೆ ತುಂಬೆಯಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣಗೊಂಡ ಸಂದರ್ಭದಲ್ಲೂ ಡ್ಯಾಂ ಮೇಲಿಂದ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಸಜೀಪ ಭಾಗದ ಜನರಿಗೆ ಅನುಕೂಲವಾಗಲಿದೆ ಎನ್ನುವ ಬೇಡಿಕೆಯನ್ನು ಮುಂದಿಡಲಾಗಿತ್ತು. ಆದರೆ ಅದು ಈಡೇರಲಿಲ್ಲ. ಇದೀಗ ಸ್ಪೀಕರ್ ಯು.ಟಿ. ಖಾದರ್ ಅವರ ಮುತುವರ್ಜಿಯಿಂದ ಉದ್ದೇಶಿತ ತುಂಬೆ-ಸಜೀಪ ನಡುವೆ ನಿರ್ಮಾಣಗೊಳ್ಳಲಿರುವ ಸೇತುವೆ ನೇತ್ರಾವತಿ ನದಿಯ ಒಂದು ಪಾರ್ಶ್ವದಲ್ಲಿರುವ ಸಜೀಪನಡು ಗ್ರಾಮ ಉಳ್ಳಾಲ ತಾಲೂಕು ವ್ಯಾಪ್ತಿಗೆ ಸೇರಿದ್ದು, ಇನ್ನೊಂದು ಪಾರ್ಶ್ವದಲ್ಲಿರುವ ತುಂಬೆ ಗ್ರಾಮ ಬಂಟ್ವಾಳ ತಾಲೂಕು ವ್ಯಾಪ್ತಿಗೆ ಸೇರಿದೆಯಾದರೆ ಈ ಎರಡೂ ಗ್ರಾಮಗಳು ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿವೆ.
ಖಾದರ್ ಶ್ರಮ:
ಸಜೀಪನಡುವಿನಿಂದ ತುಂಬೆಗೆ ಸಂಪರ್ಕ ಕಲ್ಪಿಸುವ ಹೊಸ ಸೇತುವೆ ನಿರ್ಮಾಣದ ಬೇಡಿಕೆಯನ್ನು ಸ್ಥಳೀಯ ಗ್ರಾಮಸ್ಥರು ವಿಧಾನಸಭಾಧ್ಯಕ್ಷ, ಮಂಗಳೂರು ಶಾಸಕ ಯು.ಟಿ. ಖಾದರ್ ಅವರಿಗೆ ನೀಡಿದ್ದರು. ಖಾದರ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸಚಿವ ಸಂಪುಟ ಸೇತುವೆ ನಿರ್ಮಾಣಕ್ಕೆ ಅಂದಾಜು 62 ಕೋಟಿ ರೂ. ಮೊತ್ತದ ಅನುಮೋದನೆ ನೀಡಿತ್ತು. ಸೇತುವೆಯ ಅನುಷ್ಠಾನಕ್ಕೆ ಶೀಘ್ರವೇ ಟೆಂಡರ್ ಪ್ರಕ್ರಿಯೆಯು ನಡೆಯಲಿದೆ.
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದಿಂದ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮವನ್ನು ಈ ಹೊಸ ಸೇತುವೆ ಬೆಸೆಯಲಿದ್ದು ಎರಡು ತಾಲೂಕುಗಳಿಗೆ ಸಂಪರ್ಕ ಕೊಂಡಿಯಾಗಲಿದೆ.
ಪಾಣೆಮಂಗಳೂರಿನಲ್ಲಿದೆ ಮೊದಲ ಬ್ರಿಡ್ಜ್:
ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಗೆ ನಿರ್ಮಾಣಗೊಳ್ಳಲಿರುವ 7ನೇ ಸೇತುವೆ ಇದಾಗಲಿದೆ. ಪಾಣೆಮಂಗಳೂರಿನಲ್ಲಿ ಬ್ರಿಟಿಷರು ನಿರ್ಮಿಸಿದ ಉಕ್ಕಿನ ಸೇತುವೆ ನೇತ್ರಾವತಿಗೆ ನಿರ್ಮಾಣಗೊಂಡ ಮೊದಲ ಸೇತುವೆ. ಮಾತ್ರವಲ್ಲ ಅವಿಭಜಿತ ದ.ಕ. ಜಿಲ್ಲೆಯಲ್ಲಿ ನಿರ್ಮಾಣಗೊಂಡ ಮೊದಲ ಸಂಪರ್ಕ ಸೇತುವೆಯಾಗಿದೆ. ಬಳಿಕ ಮಂಗಳೂರು-ಬೆಂಗಳೂರು ರೈಲು ಸಂಚಾರಕ್ಕೊಂದು ಉಕ್ಕಿನ ಸೇತುವೆ ನಿರ್ಮಿಸಲಾಗಿದ್ದು, ಬಳಿಕ ರಾ.ಹೆ. ಅಗಲೀಕರಣದ ಸಂದರ್ಭ ಪಾಣೆಮಂಗಳೂರಿನಲ್ಲಿ ಹೊಸ ಸೇತುವೆ ನಿರ್ಮಾಣಗೊಂಡಿತು.
ಚತುಷ್ಪಥ ಹೆದ್ದಾರಿಗಾಗಿ ಅದರ ಪಕ್ಕ ಮತ್ತೊಂದು ಸೇತುವೆ ನಿರ್ಮಾಣಗೊಂಡಿತ್ತು. ತದನಂತರ ಬಂಟ್ವಾಳ ಸಮೀಪದ ಜಕ್ರಿಬೆಟ್ಟುವಿನಲ್ಲಿ ನಿರ್ಮಾಣಗೊಂಡಿರುವ ಡ್ಯಾಂ ಮೂಲಕ ವಾಹನ ಸಂಚಾರಕ್ಕೂ ಅವಕಾಶ ಇದೆ. ಅಜಿಲಮೊಗರು-ಕಡೇಶಿವಾಲಯದ ಮಧ್ಯೆ ಸೌಹಾರ್ದ ಸೇತುವೆ ಇನ್ನು ಕೂಡ ನಿರ್ಮಾಣ ಹಂತದಲ್ಲಿದೆ.