
ಕೆಂಪು ಕಲ್ಲು, ಮರಳಿನ ಅಭಾವ: ಪರಿಹಾರಕ್ಕೆ ಮನವಿ
ಬಂಟ್ವಾಳ: ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಿಗೆ ಕೆಂಪು ಕಲ್ಲು ಮತ್ತು ಮರಳಿನ ಅಭಾವದಿಂದ ದೈನಂದಿನ ಆದಾಯವನ್ನೇ ನಂಬಿಕೊಂಡಿರುವ ಕೂಲಿ ಕಾರ್ಮಿಕರಿಗೆ ತೀವ್ರ ಸಮಸ್ಯೆ ಉಂಟಾಗಿದ್ದು, ಇದಕ್ಕೆ ಸೂಕ್ತ ಕ್ರಮ ಕೈಗೊಂಡು ಕಟ್ಟಡ ಕಾರ್ಮಿಕರು ತಮ್ಮ ಜೀವನ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಭಾರತೀಯ ಮಜ್ದೂರು ಸಂಘ ಸಂಯೋಜಿತ ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರು ಸಂಘದ ವತಿಯಿಂದ ಬಂಟ್ವಾಳದಲ್ಲಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ತಲೆದೋರಿರುವ ಕೆಂಪುಕಲ್ಲು ಹಾಗೂ ಮರಳಿನ ಅಭಾವದಿಂದಾಗಿ ಸಾವಿರಾರು ಮಂದಿ ಮೇಸ್ತ್ರೀಗಳು,ಕಟ್ಟಡ ಕಾರ್ಮಿಕರ ಸಹಿತ ಲಾರಿ ಚಾಲಕ,ಮಾಲಕರು, ಕೆಲಸಗಾರರು ಕೆಲಸವಿಲ್ಲದೆ ಬೀದಿಗೆ ಬರುವಂತಾಗಿದೆ. ದ.ಕ.ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಈ ಗಂಭೀರ ಸಮಸ್ಯೆಯನ್ನು ಬಗೆಹರಿಸಿ ಕಟ್ಟಡ ಕಾರ್ಮಿಕರಿಗೆ ಜೀವನ ನಿರ್ವಹಿಸಲು ಅನುವು ಮಾಡಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತಕುಮಾರ ಮಣಿಹಳ್ಳ ಈ ಸಂದರ್ಭಮಾತನಾಡಿ, ರಾಜ್ಯ ಸರಕಾರವು ಸ್ಪಷ್ಟವಾದ ಕಾನೂನು ರೂಪಿಸದ ಕಾರಣ, ಕಾರ್ಮಿಕರು ಕೆಲಸವಿಲ್ಲದೆ ಕುಟುಂಬ ಪೋಷಣೆಗೂ ತೊಂದರೆ ಅನುಭವಿಸುವ ಸ್ಥಿತಿ ಹೊಂದಿದ್ದಾರೆ.ಇದನ್ನೇ ನಂಬಿರುವ ಲಾರಿ ಚಾಲಕ, ಮಾಲಕರು ಸಾಲದ ಕಂತು ಪಾವತಿಸುವುದೂ ಸವಾಲಾಗಿದೆ, ಸರಕಾರ ಈ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಆಟೋ ರಿಕ್ಷಾ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ವಿಶ್ವನಾಥ್ ಚಂಡ್ತಿಮಾರ್, ಕಾರ್ಯದರ್ಶಿ ಶ್ರೀಕಾಂತ್ ಪಾಣೆಮಂಗಳೂರು, ಪ್ರಮುಖರಾದ ನಾರಾಯಣ ಶೆಟ್ಟಿ, ಸುರೇಶ್, ನವೀನ್, ಉಮಾಶಂಕರ್, ವಿಶ್ವನಾಥ್ ಕಲಾಯಿ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ದ.ಕ. ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯನ್ನು ತಹಸೀಲ್ದಾರ್ ಪರವಾಗಿ ಉಪತಹಸೀಲ್ದಾರ್ ನರೇಂದ್ರನಾಥ ಮಿತ್ತೂರು ಸ್ವೀಕರಿಸಿದರು.